ಬೆಂಗಳೂರು, ಸೆ.5 – ತಮಿಳುನಾಡು ಸರ್ಕಾರದ ಯುವ ಜನ ಖಾತೆ ಮಂತ್ರಿ, ಡಿಎಂಕೆ ಯುವ ಮುಖಂಡ ಉದಯನಿಧಿ ಸ್ಟಾಲಿನ್ (Udayanidhi Stalin) ವಿರುದ್ದ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬನ ಶಂಕರಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಅರ್.ರಮೇಶ್ ತಮಿಳುನಾಡಿನ ಉದಯನಿಧಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ನೂರು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಸನಾತನ ಧರ್ಮೀಯ ಸಮುದಾಯವನ್ನೇ ನಾಶ ಮಾಡುವಂತೆ ಕರೆಕೊಟ್ಟಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ಧಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉದಯನಿಧಿ (Udayanidhi Stalin), ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಮತ್ತು ಕೊರೋನಾಗಳಂತಹ ಮಾರಣಾಂತಿಕ ಕಾಯಿಲೆಗಳ ವೈರಸ್ ಗಳಿಗೆ ಹೋಲಿಸಿ,ಈ ವೈರಸ್ ಗಳನ್ನು ಬೇರು ಸಹಿತ ನಾಶಗೊಳಿಸುವ ರೀತಿಯಲ್ಲೇ ಸನಾತನ ಧರ್ಮವನ್ನೂ ಸಹ ನಾಶಗೊಳಿಸಿದರೆ ಮಾತ್ರ ಈ ದೇಶಕ್ಕೆ ಒಳಿತಾಗುತ್ತದೆ ಎಂಬ ಆಘಾತಕಾರಿ ಹೇಳಿಕೆಯನ್ನು ನೀಡಿರುತ್ತಾರೆ.
ಆ ಮೂಲಕ ಕೇವಲ ಭಾರತವೊಂದರಲ್ಲೇ ವಾಸಿಸುತ್ತಿರುವ ನೂರು ಕೋಟಿಗೂ ಹೆಚ್ಚು ಸನಾತನ ಹಿಂದೂ ಧರ್ಮೀಯ ಸಮುದಾಯದ ಮಾರಣ ಹೋಮಕ್ಕೆ ಕರೆ ಕೊಡುವ ಮೂಲಕ ಭಾರತ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಉದಯನಿಧಿ ಸ್ಟಾಲಿನ್ ರವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.