ಬೆಂಗಳೂರು,ಫೆ.2-
ಮುಂಬರುವ ವಿಧಾನಸಭೆ ಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳ ಆಯ್ಕೆಗೆ Congress ಚುನಾವಣಾ ಸಮಿತಿಯ ಸಭೆ ನಡೆದಿದ್ದು, ಸುಮಾರು 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿದೆ. ಬಹುತೇಕ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ಪಕ್ಕಾ ಆಗಿದೆ. AICC ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್‍ಸಿಂಗ್ ಸುರ್ಜೇವಾಲ, KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಚುನಾವಣಾ ಸಮಿತಿಯ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಚುನಾವಣಾ ಪೂರ್ವದಲ್ಲಿ ನಡೆದ ಹಲವು ಸಮೀಕ್ಷೆಗಳ ವರದಿ ಆಧರಿಸಿ 130ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಏಕ ವ್ಯಕ್ತಿಯ ಹೆಸರನ್ನು ಹೈಕಮಾಂಡ್‍ಗೆ ಶಿಫಾರಸ್ಸು ಮಾಡಲು ತೀರ್ಮಾನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಭೆಯಲ್ಲಿ ಪ್ರತಿಯೊಂದು ಕ್ಷೇತ್ರದ ಕುರಿತು ಚರ್ಚೆ ನಡೆಸಲಾಯಿತು. ಆಯಾ ಜಿಲ್ಲಾವಾರು ಸಮಿತಿಗಳು, ನಾಯಕರು ಶಿಫಾರಸ್ಸು ಮಾಡಿದ ಪಟ್ಟಿಯಲ್ಲಿನ ಹೆಸರುಗಳನ್ನು ಅವಲೋಕಿಸಲಾಯಿತು. ತೀವ್ರ ವಿರೋಧಗಳು ಮತ್ತು ಆಕ್ಷೇಪಗಳು ಕೇಳಿ ಬಂದ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಎರಡನೇ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಕುರಿತು ನಿರ್ಧರಿಸಲಾಗಿದೆ.
ಮೊದಲ ಪಟ್ಟಿಯಲ್ಲಿ 150 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದ್ದು ಇವುಗಳ ಬಗ್ಗೆ ವಿವರಣೆಯೊಂದಿಗೆ ಹೈಕಮಾಂಡ್‍ಗೆ ರವಾನಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಭ್ಯರ್ಥಿಗಳ ಆಯ್ಕೆಯ ವೇಳೆ ಉದಯ್‍ಪುರ್ ಘೋಷಣೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂಬುದು ಹೈಕಮಾಂಡ್‍ನ ಕಟ್ಟುನಿಟ್ಟಿನ ಸೂಚನೆಯಾಗಿದ್ದು, ಅದನ್ನು ಎಲ್ಲಾ ಹಂತದಲ್ಲೂ ಪಾಲಿಸಲಾಗಿದೆ.
ತ್ಯಾಗ ಅನಿವಾರ್ಯ:
ಈ ನಡುವೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ನಿರೀಕ್ಷೆ ಇರುವುದರಿಂದ ಕೆಲವು ಕಡೆ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಕೆಲವು ತ್ಯಾಗ ಮಾಡುವುದು ಅನಿವಾರ್ಯ ಎಂದು KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸಭೆಗೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮತದಾರರು ವಿಶ್ವಾಸ ನೀಡಿರುವುದರಿಂದ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ 10, 12, 20 ಅರ್ಜಿಗಳು ಬಂದಿವೆ. ಇಂತಹ ಕಡೆಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ತ್ಯಾಗ ಮಾಡಲೇಬೇಕು. ಪಕ್ಷ ಅಧಿಕಾರಕ್ಕೆ ಬಂದರೆ ಬೇರೆ, ಬೇರೆ ರೀತಿಯಲ್ಲಿ ಅವರಿಗೆ ಅಧಿಕಾರ ನೀಡಲಾಗುವುದು. ಹೀಗಾಗಿ ಪಕ್ಷದ ಟಿಕೆಟ್ ಕೋರಿ ಅರ್ಜಿ ಹಾಕಿರುವುದರಲ್ಲಿ ತಪ್ಪಿಲ್ಲ. ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ನೀವೆಲ್ಲರೂ ಒಗ್ಗಟ್ಟಿನ ಸಹಕಾರ ನೀಡಬೇಕು' ಎಂದು ಎಲ್ಲಾ ಆಕಾಂಕ್ಷಿಗಳಲ್ಲಿ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.