ಅಚ್ಚರಿಯ ಹಾಗು ಹಠಾತ್ ವಿದ್ಯಮಾನವೊಂದರಲ್ಲಿ ಕಾಂಗ್ರೆಸ್ ರಾಜ್ಯಸಭೆ ಚುನಾವಣೆಗೆ ತನ್ನ ಎರಡನೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ವಿಧಾನಸಭೆಯಲ್ಲಿ ಹೊಂದಿರುವ ಶಾಸಕರ ಸಂಖ್ಯಾಬಲದ ಆಧಾರದಲ್ಲಿ ಒಬ್ಬರು ಸುಲಭವಾಗಿ ಆಯ್ಕೆಯಾಗಲಿದ್ದಾರೆ. ನಂತರದಲ್ಲಿ ಉಳಿಯುವ ಹೆಚ್ಚುವರಿ ಮತಗಳ ಜೊತೆಗೆ ಜೆಡಿಎಸ್ ನ ಬೆಂಬಲ ಪಡೆದರೆ ಮಾತ್ರ ಎರಡನೆ ಅಭ್ಯರ್ಥಿ ಆಯ್ಕೆಯಾಗಲು ಸಾಧ್ಯ. ಈಗಾಗಲೇ ಜೆಡಿಎಸ್ ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಲು ಸಿದ್ದತೆ ನಡೆಸಿದ್ದು, ಈಗಾಗಲೇ ಕುಪೇಂದ್ರ ರೆಡ್ಡಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು.
ಬಹುತೇಕ ಕುಪೇಂದ್ರ ರೆಡ್ಡಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನುತ್ತಿರುವಾಗಲೇ ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ರಾಜ್ಯಸಭೆ ಮಾಜಿ ಸದಸ್ಯ ಕೆ.ರಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರನ್ನು ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
ಜಾತ್ಯತೀತ ತತ್ವದ ಆಧಾರದಲ್ಲಿ ತಮ್ಮ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಜೆಡಿಎಸ್ ನಾಯಕರಿಗೆ ಮನವಿ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿದ್ದು ಕುತೂಹಲ ಮೂಡಿಸಿದೆ.