ಜೋಧಪುರ(ರಾಜಸ್ಥಾನ),ಜೂ.13- ಕಳ್ಳರ ಪತ್ತೆಗೆ ಒಂದು ಬ್ಲೇಡ್ ಸುಳಿವು ನೀಡಿದ್ದು ವಿಶೇಷ ಎಂದರೆ ಇದೊಂದು ಸುಳಿವು ಪಡೆಯಲು ರೈಲ್ವೆ ಪೊಲೀಸರು ಸುಮಾರು 400 ಅಂಗಡಿಗಳಿಗೆ ಅಲೆದಾಡಿದ್ದಾರೆ.
ಜೋಧಪುರ-ಪಾಲಿ ರೈಲುಮಾರ್ಗದಲ್ಲಿ ಬೊಮದಾರ ಮತ್ತು ರಾಜ್ಕಿಯಾವಾಸ್ ರೈಲ್ವೇ ಸ್ಟೇಷನ್ಗಳ ನಡುವೆ ಕಳ್ಳರು ಇತ್ತೀಚೆಗೆ ಹೈ ವೋಲ್ಟೇಜ್ ಕೇಬಲ್ ಕಳವು ಮಾಡಿದ್ದರು. ನೂರು ಮೀಟರ್ ಉದ್ದದ ತಾಮ್ರದ ತಂತಿಯನ್ನು ಒಂದು ವಾರದ ಹಿಂದೆ ಕಳವು ಮಾಡಿದ್ದರ ಕುರಿತು ತನಿಖೆಗಿಳಿದ ರೈಲ್ವೆ ಪೊಲೀಸರಿಗೆ ಇದು ಹೈ-ಟೆನ್ಷನ್ ಪ್ರಕರಣವಾಗಿತ್ತು.
ಅದಾಗ್ಯೂ ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಶಂಕರ್ ಲಾಲ್ (25) ಮತ್ತು ಹನ್ಸ್ ರಾಜ್ (28)ನನ್ನು ಬಂಧಿಸಿದ್ದಾರೆ. ಆದರೆ ಈ ಕಳ್ಳರು ಕಳ್ಳತನಕ್ಕೆ ಬಳಸಿದ್ದ ಉಪಕರಣವೊಂದನ್ನು ಸ್ಥಳದಲ್ಲಿ ಬಿಟ್ಟುಹೋಗಿದ್ದರು. ಸ್ಥಳ ಪರಿಶೀಲನೆ ನಡೆಸಿದ್ದ ಪೊಲೀಸರು ಅದನ್ನು ವಶಕ್ಕೆ ಪಡೆದು ತನಿಖೆಗೆ ಮುಂದಾಗಿದ್ದರು.
ತನಿಖೆಗಿಳಿದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ತಂಡದವರು ಸುತ್ತಮುತ್ತಲ ಹಳ್ಳಿಗಳ 400 ಅಂಗಡಿಗಳಿಗೆ ತೆರಳಿ ಮಾಹಿತಿ ಕಲೆಹಾಕಿದ್ದರು. ಆ ಪೈಕಿ ಕಳ್ಳತನ ನಡೆದ ಐದು ಗಂಟೆಗಳಿಗೆ ಮೊದಲು ಪಾಲಿಯ ಹಾರ್ಡ್ವೇರ್ ಅಂಗಡಿಯೊಂದರಲ್ಲಿ ಬ್ಲೇಡ್ ಖರೀದಿಸಿದ್ದು ತಿಳಿದುಬಂದಿತ್ತು. ಈ ಸುಳಿವಿನ ಮೇರೆಗೆ ತನಿಖೆ ತೀವ್ರಗೊಳಿಸಿದ ಪೊಲೀಸರಿಗೆ ಅದು ಶಂಕರ್ ಲಾಲ್ ಮತ್ತು ಹನ್ಸ್ ರಾಜ್ ಎಂಬುದು ತಿಳಿಯಿತು.
ಈ ಮೇರೆಗೆ ಕಾರ್ಯಾಚರಣೆಗೆ ಇಳಿದ ರೈಲ್ವೆ ಪೊಲೀಸರು ಅವರಿಬ್ಬರನ್ನು ಬಂಧಿಸಿದ್ದು, ಅವರು ಇನ್ನಿಬ್ಬರ ಜತೆ ಸೇರಿ ಈ ಕಳ್ಳತನ ಎಸಗಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಇದೀಗ ಇನ್ನಿಬ್ಬರ ಪತ್ತೆಗೆ ಪೊಲೀಸರು ಮುಂದಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.