ಮಂಗಳೂರು,ಡಿ.1-ಜ್ಯುವೆಲ್ಲರಿ ಅಂಗಡಿಯ ದರೋಡೆಗೆ ಯತ್ನಿಸಿದ್ದ ಕುಖ್ಯಾತ ಅಂತಾರಾಜ್ಯ ಸಾಹೇಬ್ ಗಂಜ್ ದರೋಡೆ ಗ್ಯಾಂಗ್ನ 9 ಮಂದಿಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುಜರಾತ್ನ ಭಾಸ್ಕರ ಬೆಳ್ಚಪಾಡ(65), ನೇಪಾಳದ ದಿನೇಶ್ ರಾವಲ್ ಯಾನೆ ಸಾಗರ್ ಯಾನೆ ದಿಲ್ಲಿ(38) ಬಿಸ್ತ ರೂಪ್ ಸಿಂಗ್ (34), ಕೃಷ್ಣ ಬಹದ್ದೂರ್ ಬೋಗಟಿ (41), ಜಾರ್ಖಂಡ್ನ ಮೊಹಮ್ಮದ್ ಜಾಮೀಲ್ ಶೇಖ್(29), ಇಂಜಮಾಮ್ ಉಲ್ ಹಕ್(27), ಇಮ್ದದುಲ್ ರಝಾಕ್ ಶೇಖ್ (32), ಬಿವುಲ್ ಶೇಖ್ (31), ಇಮ್ರಾನ್ ಶೇಖ್ (30) ಬಂಧಿತ ದರೋಡೆಕೋರರಾಗಿದ್ದಾರೆ.
ಬಂಧಿತ ಆರೋಪಿಗಳು ನಗರದ ತೊಕ್ಕೊಟ್ಟು ಮಂಚಿಲ ಪರಿಸರದ ಮನೆಯೊಂದರಲ್ಲಿ ಉತ್ತರ ಭಾರತ ಮೂಲದ ಸಾಹೇಬ್ ಗಂಜ್ ದರೋಡೆ ಗ್ಯಾಂಗ್ ವಾಸವಿತ್ತು. ಈ ಗ್ಯಾಂಗ್ ತೊಕ್ಕೊಟ್ಟಿನ ಜ್ಯುವೆಲ್ಲರಿಯೊಂದನ್ನು ಕನ್ನ ಕೊರೆದು ದರೋಡೆಗೆ ಸಂಚು ರೂಪಿಸುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ಮಂಗಳೂರು ಸಿಸಿಬಿ ಪೊಲೀಸರ ತಂಡ ದಾಳಿ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.ದರೋಡೆಗಾಗಿ ಸಂಗ್ರಹಿಸಿಟ್ಟಿದ್ದ ವಿವಿಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜ್ಯುವೆಲ್ಲರಿ ದರೋಡೆಗೆ ಸ್ಕೆಚ್:
ಗ್ಯಾಂಗ್ನ ಸದಸ್ಯರು ತೊಕ್ಕೊಟ್ಟಿನ ಸೂಪರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಜ್ಯುವೆಲ್ಲರಿ ಅಂಗಡಿಯನ್ನು ದರೋಡೆ ಮಾಡುವ ಉದ್ದೇಶದಿಂದ ಸುಮಾರು 15 ದಿನಗಳ ಹಿಂದೆ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದರು. ಬಳಿಕ ತೊಕ್ಕೊಟ್ಟು ಬಳಿಯ ಲಾಡ್ಜ್ ಹಾಗೂ ತೊಕ್ಕೊಟ್ಟು ಮಂಚಿಲ ಬಳಿಯ ವ್ಯಕ್ತಿಯೊಬ್ಬರ ಮನೆಯೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ದರೋಡೆಗೆ ಸಂಚು ರೂಪಿಸಿದ್ದರು. ಈ ಗ್ಯಾಂಗ್ನಲ್ಲಿ ನೇಪಾಳದ ಆರೋಪಿಗಳು ಇದ್ದು, ದರೋಡೆ ನಂತರ ಕದ್ದ ವಸ್ತುಗಳೊಂದಿಗೆ ಇವರು ನೇಪಾಳಕ್ಕೆ ಪರಾರಿಯಾಗುತ್ತಿದ್ದರು.
ಜ್ಯುವೆಲ್ಲರಿ ಗುರುತಿಸಿಕೊಂಡು ದರೋಡೆಗೆ ಬೇಕಾದ ಗ್ಯಾಸ್ ಕಟ್ಟರ್, ಆಕ್ಸಿಜನ್ ಸಿಲಿಂಡರ್, ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟಿಂಗ್ ನೋಝಲ್, ಕಟ್ಟಿಂಗ್ ಹೋಸ್ ಪೈಪ್, ಲೆದರ್ ಹ್ಯಾಂಡ್ ಗ್ಲೌಸ್, ಕಬ್ಬಿಣದ ರಾಡ್, ತಲವಾರು, ಆ್ಯಕ್ಸೋ ಬ್ಲೇಡ್, ಹ್ಯಾಮರ್, ಸ್ಕ್ರೂ ಡ್ರೈವರ್, ಮೆಣಸಿನ ಹುಡಿ, ನೈಲಾನ್ ಹಗ್ಗ ಹಾಗೂ ಇತರ ಹಲವಾರು ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಇದರ ಒಟ್ಟು ಮೌಲ್ಯ ರೂ. 2,90,000 ಆಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆ ಪ್ರಕರಣ ದಾಖಲು:
ಇತ್ತೀಚೆಗೆ ಮಂಗಳೂರು ನಗರದ ಹೊರವಲಯದ ನಾಟೆಕಲ್, ಆಂಬಿಕಾ ರೋಡ್, ಉಚ್ಚಿಲ ಬಳಿಯಿಂದ ರಾತ್ರಿ ವೇಳೆಯಲ್ಲಿ ಮೂರು ದ್ವಿಚಕ್ರ ಸವಾರರನ್ನು ಅಡ್ಡಗಟ್ಟಿ ಹಿಂದಿ ಭಾಷೆಯಲ್ಲಿ ಬೈದು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಅವರಿಂದ ಸ್ಕೂಟರ್ಗಳನ್ನು ಬಲವಂತವಾಗಿ ಸುಲಿಗೆ ಮಾಡಿದ ಪ್ರಕರಣ ದಾಖಲಾಗಿತ್ತು. ಸಾಹೇಜ್ ಗಂಜ್ ದರೋಡೆ ಗ್ಯಾಂಗ್ ಆರೋಪಿಗಳು ಜ್ಯುವೆಲ್ಲರಿ ದರೋಡೆಗಾಗಿ ಸುಲಿಗೆ ಮಾಡಿದ್ದ ಮೂರು ಸ್ಕೂಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪೈಕಿ ಭಾಸ್ಕರ ಬೆಳ್ಚಡ, ದಿನೇಶ್ ರಾವಲ್, ಇಂಜಮಾಮ್ ಉಲ್ ಹಕ್, ಬಿಸ್ತ ರೂಪ್ ಸಿಂಗ್, ಕೃಷ್ಣ ಬಹದ್ದೂರ್ ಬೋಗಟಿ ಎಂಬವರ ವಿರುದ್ಧ ಮುಂಬೈ, ಪುಣೆ, ಸೂರತ್, ಮಧ್ಯಪ್ರದೇಶದ ಮಾಧವ ನಗರ, ಕೇರಳದ ತ್ರಿಶೂರ್, ಪಂಜಾಬ್ ರಾಜ್ಯಗಳಲ್ಲಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಬ್ಯಾಂಕ್ ದರೋಡೆ, ಜ್ಯುವೆಲ್ಲರಿ ದರೋಡೆ ಪ್ರಕರಣಗಳು ದಾಖಲಾಗಿದೆ.
ಈ ಕುಖ್ಯಾತ ಸಾಹೇಬ್ ಗಂಜ್ ದರೋಡೆ ಗ್ಯಾಂಗ್ನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್, ಪಿಎಸ್ಐ ರಾಜೇಂದ್ರ ಮತ್ತವರ ಸಿಬ್ಬಂದಿ ಪಾಲ್ಗೊಂಡಿದ್ದರು