ಬೆಂಗಳೂರು, ಮಾ.9- ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಮ್ಮೆ ದಲಿತ ಮುಖ್ಯಮಂತ್ರಿ (Dalit CM) ವಿಚಾರ ಮುನ್ನೆಲಗೆ ಬಂದಿದೆ. ಕೆಲವು ದಿನಗಳಿಂದಷ್ಟೇ ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದ ಗೃಹ ಮಂತ್ರಿ ಪರಮೇಶ್ವರ್ ಈಗ ಈ ವಿಚಾರ ಅಪ್ರಸ್ತುತ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಯ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ ರಾಜ್ಯದಲ್ಲಿ ಸ್ಥಿರ ಸರ್ಕಾರವಿದೆ ಇಂತಹ ಸಮಯದಲ್ಲಿ ದಲಿತ ಮುಖ್ಯಮಂತ್ರಿ ಎನ್ನುವ ವಿಷಯ ಚರ್ಚೆಗೆ ಬಂದಿರುವುದು ಅಪ್ರಸ್ತುತ ಎಂದು ಹೇಳಿದರು.
ಸದ್ಯ ರಾಜ್ಯದಲ್ಲಿ ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ನಮ್ಮ ಗುರಿ ಇಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ ಆ ನಿಟ್ಟಿನಲ್ಲಿ ನಾವೆಲ್ಲರೂ ಗಮನಹರಿಸಬೇಕಿದೆ ಎಂದು ತಿಳಿಸಿದರು.
ಸಹಕಾರ ಸಚಿವ ರಾಜಣ್ಣ ಅವರು ಈ ಹಿಂದೆ ಒಮ್ಮೆ ದಲಿತ ಮುಖ್ಯಮಂತ್ರಿಯ ವಿಚಾರ ಪ್ರಸ್ತಾಪ ಮಾಡಿದ್ದರು ಆಗ ನಾನು ನನ್ನ ನಿಲುವನ್ನು ತಿಳಿಸಿದ್ದೇನೆ ಈಗ ದಲಿತ ಮುಖ್ಯಮಂತ್ರಿ ವಿಚಾರವಾಗಿ ಬೇರೆ ಬೇರೆ ವಿಷಯಗಳು ಚರ್ಚೆಯಲ್ಲಿ ಇವೆ ಅದಕ್ಕೆ ಇದು ಸೂಕ್ತ ಸಮಯವಲ್ಲ ಎಂದು ಅಭಿಪ್ರಾಯಪಟ್ಟರು.
ಲೋಕಸಭೆ ಚುನಾವಣೆ ಸಮಯದಲ್ಲಿ ದಲಿತರಿಗೆ ಮುಖ್ಯಮಂತ್ರಿ ಹುದ್ದೆ ನೀಡಿದರೆ ಕಾಂಗ್ರೆಸ್ಸಿಗೆ ಮತ್ತಷ್ಟು ಬಲ ಬರಲಿದೆ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ ಆದರೆ ಅದಕ್ಕೆ ಇದು ಸಕಾಲ ಅಲ್ಲ ಎಂದು ತಿಳಿಸಿದರು.
ತುಮಕೂರು ಸೇರಿದಂತೆ ಏಳು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ಇವರು ಗೆಲ್ಲುವ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ತುಮಕೂರಿನಲ್ಲಿ ಅಭ್ಯರ್ಥಿಯ ಆಯ್ಕೆ ಬಗ್ಗೆ ಸ್ವಲ್ಪ ಅಪಸ್ವರ ಕೇಳಿದಂತೆ ಈ ಬಗ್ಗೆ ಎಲ್ರ ಜೊತೆ ಮಾತನಾಡಿ ಬಗೆಹರಿಸುತ್ತೇನೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ಹೇಳಿದರು.
ಕಲಬುರ್ಗಿಯಿಂದ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಣಕ್ಕೆ ಇಳಿಯುವ ಬಗ್ಗೆ ನಾವು ಅಭಿಪ್ರಾಯ ಹೇಳುವುದು ಸರಿಯಲ್ಲ ಅವರು ಅತ್ಯಂತ ಹಿರಿಯ ನಾಯಕರು ಉನ್ನತ ಸ್ಥಾನದಲ್ಲಿದ್ದಾರೆ ಅವರೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.