ಬೆಂಗಳೂರು.ಜ,5: ರಾಜ್ಯದಲ್ಲಿ ಮತ್ತೊಮ್ಮೆ ಮೂವರು ಮುಖ್ಯಮಂತ್ರಿಗಳ ನೇಮಕ ವಿಚಾರ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕೆಲ ದಿನಗಳ ಕಾಲ ಈ ಕುರಿತಾದ ಚಟುವಟಿಕೆಗಳಿಗೆ ವಿರಾಮ ನೀಡಿದ್ದ ನಾಯಕರು ಇದೀಗ ಮತ್ತೊಮ್ಮೆ ಅದಕ್ಕೆ ತೀವ್ರ ಸ್ವರೂಪ ನೀಡಲು ತೀರ್ಮಾನಿಸಿದ್ದಾರೆ.
ಮೂವರು ಉಪಮುಖ್ಯಮಂತ್ರಿಗಳ ನೇಮಕಕ್ಕೆ ಪ್ರಬಲ ನಡೆಸುತ್ತಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಕಳೆದ ರಾತ್ರಿ ಮಹತ್ವದ ಸಭೆ ನಡೆದಿದೆ.
ಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್ ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ ಸಹಕಾರ ಸಚಿವ ರಾಜಣ್ಣ ಅವರು ಪಾಲ್ಗೊಂಡು ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ.
ಉಪ ಮುಖ್ಯಮಂತ್ರಿ ಹುದ್ದೆಯಷ್ಟೇ ಅಲ್ಲದೇ ಸದ್ಯ ಉಪ ಮುಖ್ಯಮಂತ್ರಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಾರ್ಯವೈಖರಿ ಕುರಿತು ಚರ್ಚೆ ನಡೆದಿದೆ.
ಈ ಸಭೆಯಲ್ಲಿ ತಮ್ಮ ಬೇಡಿಕೆ ಈಡೇರಿಸುವಂತೆ ವರಿಷ್ಠರ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆ ಲೋಕಸಭೆ ಚುನಾವಣೆಗೆ ಮುನ್ನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಲಿಂಗಾಯತ ಸಮುದಾಯಕ್ಕೆ ಸೇರಿದ ಹಿರಿಯ ನಾಯಕರನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಕ ಮಾಡಬೇಕು ಎಂದು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರಿಗೆ ಭೇಟಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಸುರ್ಜೇವಾಲಾ ವಿದೇಶ ಪ್ರವಾಸಕ್ಕೆ ತೆರಳಿದ್ದು ಅವರು ಸ್ವದೇಶಕ್ಕೆ ಹಿಂತಿರುಗಿತ್ತಿದ್ದಂತೆ ಈ ಎಲ್ಲರೂ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ ಎಂದು ಗೊತ್ತಾಗಿದೆ.
ಇದರೊಂದಿಗೆ ಶಿವಕುಮಾರ್ ಅನಗತ್ಯವಾಗಿ ಬೆಳಗಾವಿ ರಾಜಕಾರಣದಲ್ಲಿ ಅಸ್ತಕ್ಷೇಪ ಮಾಡುತ್ತಿದ್ದಾರೆ ಈ ಸಂಬಂಧ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಸ್ಪಷ್ಟ ಸೂಚನೆ ನೀಡಿದ ನಂತರವೂ ಶಿವಕುಮಾರ್ ಅವರು ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿಲ್ಲ ಎಂದು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿರುವ ಸತೀಶ್ ಜಾರಕಿಹೊಳಿ ಅವರು ಈ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತರಲು ತೀರ್ಮಾನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜಕೀಯ ಚರ್ಚೆ:
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್,ನಿನ್ನೆ ರಾತ್ರಿ ನಡೆದ ಭೋಜನಾ ಕೂಟ ಸಭೆಯಲ್ಲಿ ಭಾಗವಹಿಸಿ ಊಟ ಮಾಡಿ ಬಂದಿದ್ದೇನೆ. ರಾಜಕಾರಣಿಗಳು ಒಂದೆಡೆ ಸೇರಿದ ಮೇಲೆ ರಾಜಕೀಯವೇ ಚರ್ಚೆಯಾಗುತ್ತದೆ. ಅಲ್ಲಿ ಏನೆಲ್ಲಾ ಮಾತುಕತೆ ನಡೆದಿದೆ ಎಂಬುದನ್ನು ಬಹಿರಂಗಪಡಿಸಲಾಗುವುದಿಲ್ಲ. ಅದು ರಹಸ್ಯ ಸಭೆ ಎಂದ ಮೇಲೆ ಎಲ್ಲವನ್ನೂ ಬಹಿರಂಗವಾಗಿ ಹೇಳಲು ಹೇಗೆ ಸಾಧ್ಯ ಎಂದರು.
ಡಿಸಿಎಂ ಹುದ್ದೆ ಬೇಕು:
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ ಲೋಕಸಭೆ ಚುನಾವಣೆಗೂ ಮೊದಲೇ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವುದು ಸೂಕ್ತ ಎಂದು ಹೇಳಿದರು.
ಒಂದೇ ಪಕ್ಷದ ಸಚಿವರುಗಳು ಸಹಜವಾಗಿ ಭೋಜನ ಕೂಟಕ್ಕೆ ಸೇರಿದ್ದೇವೆ. ಅದರಲ್ಲಿ ವಿಶೇಷವೇನಿಲ್ಲ. ರಾಜಕಾರಣಿಗಳು ಸೇರಿದರೆ ರಾಜಕಾರಣ ಚರ್ಚೆಯಾಗಿಯೇ ಆಗುತ್ತದೆ ಎಂದರು.
ನಮ್ಮ ಮುಂದೆ ಲೋಕಸಭೆ ಚುನಾವಣೆಯ ಸವಾಲಿದೆ. ಅದನ್ನು ನಿಭಾಯಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಚುನಾವಣೆಗೂ ಮೊದಲೇ ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಿದರೆ ರಾಜಕೀಯವಾಗಿ ಪಕ್ಷಕ್ಕೆ ಲಾಭವಾಗುತ್ತದೆ ಎಂಬುದು ಎಲ್ಲರ ಅಭಿಪ್ರಾಯ. ಅದರ ಹೊರತಾಗಿ ದಲಿತ ಮುಖ್ಯಮಂತ್ರಿ ಕುರಿತು ಚರ್ಚೆಯಾಗಿಲ್ಲ ಎಂದು ಹೇಳಿದರು.
ಇದೇ ಜನವರಿ 28 ರಂದು ಚಿತ್ರದುರ್ಗದಲ್ಲಿ ಶೋಷಿತರ ಸಮಾವೇಶ, ಫೆಬ್ರವರಿಯಲ್ಲಿ ಚಿತ್ರದುರ್ಗದಲ್ಲಿ ಎಸ್‍ಸಿ, ಎಸ್ಟಿ ಸಮಾವೇಶ ಆಯೋಜನೆ ಮಾಡುವ ಚರ್ಚೆಗಳಾಗಿವೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲಾಗಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿಯ ಬಗ್ಗೆ ಯಾವುದೇ ರೀತಿಯ ಚರ್ಚೆಗಳಾಗಿಲ್ಲ. ಅದು ಸರ್ಕಾರಕ್ಕೆ ಸಲ್ಲಿಕೆಯಾದ ಬಳಿಕವಷ್ಟೇ ಅದರ ಬಗ್ಗೆ ಮಾತನಾಡುತ್ತೇವೆ. ಸದ್ಯಕ್ಕೆ ಅದರ ಬಗ್ಗೆ ಒತ್ತಡ ಹೇರುವ ಸಂದರ್ಭವೂ ಇಲ್ಲ ಎಂದರು.