ನವದೆಹಲಿ,ಜ.24-
ವಿಮಾನ ಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಜೊತೆಗೆ ಅನುಚಿತವಾಗಿ ವರ್ತಿಸಿದ ಪ್ರಯಾಣಿಕನನ್ನು ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆಯು ವಿಮಾನದಿಂದ ಕೆಳಗಿಳಿಸಿದೆ.
ಈ ಘಟನೆ ನಿನ್ನೆ ನಡೆದಿದ್ದು, ದೆಹಲಿ-ಹೈದರಾಬಾದ್ ವಿಮಾನದಿಂದ ಪ್ರಯಾಣಿಕನನ್ನು ಕೆಳಗಿಸಿದ ಕುರಿತು ಸ್ಪೈಸ್ಜೆಟ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
‘ವಿಮಾನದ ಬೋರ್ಡಿಂಗ್ ವೇಳೆ ಪ್ರಯಾಣಿಕರೊಬ್ಬರು ಅಲ್ಲಿನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದರು,ಲೈಂಗಿಕ ಹಿಂಸೆ ನೀಡಲು ಮುಂದಾದರು. ಇದರಿಂದ ಎಚ್ಚೆತ್ತ ಮಹಿಳಾ ಉದ್ಯೋಗಿ ತಕ್ಷಣ ಈ ಕುರಿತು ಭದ್ರತಾ ದಳ ಹಾಗೂ ಇತರ ಸಿಬ್ಬಂದಿಗೆ ಮಾಹಿತಿ ನೀಡಿದರು. ನಂತರ ಆರೋಪಿ ಪ್ರಯಾಣಿಕ ಹಾಗೂ ಸಹಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ, ಭದ್ರತಾ ಸಿಬ್ಬಂದಿಯ ವಶಕ್ಕೆ ಒಪ್ಪಿಸಲಾಯಿತು’ ಎಂದು ಸ್ಪೈಸ್ಜೆಟ್ ಹೇಳಿಕೆಯಲ್ಲಿ ತಿಳಿಸಿದೆ.
ಗಗನಸಖಿಯೊಬ್ಬರಿಗೆ ಹಿಂಸೆಯಾಗುವ ರೀತಿಯಲ್ಲಿ ಆರೋಪಿ ಪ್ರಯಾಣಿಕ ಅಂಗಾಂಗ ಸ್ಪರ್ಶ ಮಾಡಿದ್ದ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಆರೋಪಿ ಪ್ರಯಾಣಿಕನು ತಾನು ಅಂಥ ದುಷ್ಕೃತ್ಯ ಎಸಗಿಲ್ಲ. ಅಚಾನಕ್ ಆಗಿ ನನ್ನ ಕೈ ಅವರನ್ನು ತಾಗಿತು. ವಿಮಾನದಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ಹೀಗಾಯಿತೇ ವಿನಃ ಇದು ಉದ್ದೇಶಪೂರ್ವಕ ಕೃತ್ಯ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿಬ್ಬಂದಿಯ ಪರವಾಗಿ ವಿಮಾನಸಂಸ್ಥೆಯು ಗಟ್ಟಿಯಾಗಿ ನಿಂತ ನಂತರ ಆರೋಪಿ ಪ್ರಯಾಣಿಕನು ಲಿಖಿತ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಕ್ಷಮೆಯಾಚಿಸಿದ. ಆದರೆ ಪ್ರಯಾಣದಲ್ಲಿ ಮುಂದೆಯೂ ತೊಂದರೆಯಾಗಬಹುದು ಎಂದು ಅಂದಾಜಿಸಿದ ಸ್ಪೈಸ್ಜೆಟ್ ವ್ಯವಸ್ಥಾಪಕರು ಆರೋಪಿ ಪ್ರಯಾಣಿಕನನ್ನು ಕೆಳಗಿಳಿಸಲು ನಿರ್ಧರಿಸಿದರು.
ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಕರ ಅನುಚಿತ ವರ್ತನೆ ಹೆಚ್ಚಾಗುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಏರ್ ಇಂಡಿಯಾದಲ್ಲಿ ಪ್ರಯಾಣಿಕರು ಅನುಚಿತವಾಗಿ ವರ್ತಿಸಿದ ಎರಡು ಘಟನೆಗಳು ಒಂದಾದ ಮೇಲೊಂದರಂತೆ ವರದಿಯಾದ ನಂತರ ನಾಗರಿಕ ವಿಮಾನಯಾನದ ಮಹಾನಿರ್ದೇಶಕರು (ಡಿಜಿಸಿಎ) ಏರ್ ಇಂಡಿಯಾದ ವ್ಯವಸ್ಥಾಪಕರಿಗೆ ಕಟುವಾಗಿ ನೊಟೀಸ್ ಜಾರಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಏರ್ ಇಂಡಿಯಾದ ಓರ್ವ ಪ್ರಯಾಣಿಕ ಶೌಚಾಲಯದಲ್ಲಿ ಸಿಗರೇಟ್ ಸೇದುತ್ತಿದ್ದ. ನಿಲ್ಲಿಸುವಂತೆ ಹೇಳಿದ ಸಿಬ್ಬಂದಿಯ ಮಾತಿಗೆ ಬೆಲೆ ಕೊಟ್ಟಿರಲಿಲ್ಲ. ಮತ್ತೋರ್ವ ಪ್ರಯಾಣಿಕ ಮಹಿಳಾ ಸಹಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಎರಡೂ ಪ್ರಕರಣಗಳನ್ನು ಡಿಜಿಸಿಎ ಗಂಭೀರವಾಗಿ ಪರಿಗಣಿಸಿತ್ತು.
ಪ್ರಯಾಣಿಕರಲ್ಲಿ ಶಿಸ್ತು ಕಾಪಾಡುವ ಜವಾಬ್ದಾರಿಯನ್ನೂ ವಿಮಾನಯಾನ ಸಂಸ್ಥೆಗಳು ನಿರ್ವಹಿಸಬೇಕು. ನಿಯಮ ಉಲ್ಲಂಘಿಸುವ ಪ್ರಯಾಣಿಕರ ಬಗ್ಗೆ ಭದ್ರತಾ ಸಿಬ್ಬಂದಿಗೆ ಮಾಹಿತಿ ಕೊಟ್ಟು, ಮುಂದಿನ ಕ್ರಮಕ್ಕೆ ನೆರವಾಗಬೇಕು ಎಂದು ಪರೋಕ್ಷವಾಗಿ ಡಿಜಿಸಿಎ ಎಚ್ಚರಿಸಿತ್ತು. ಈ ನೊಟೀಸ್ ನಂತರ ಪ್ರಯಾಣಿಕರ ಬಗ್ಗೆ ವೈಮಾನಿಕ ಕಂಪನಿಗಳ ಧೋರಣೆಯ ಬಗ್ಗೆ ಮಾಹಿತಿ ನೀಡಿದೆ.
Previous Articleಸಾರಿಗೆ ನೌಕರರ ಪ್ರತಿಭಟನೆ.
Next Article ಕೇಸ್ ಮುಚ್ಚಿ ಹಾಕಲು ಲಂಚ ಕೇಳಿದ CID ಅಧಿಕಾರಿ.