ನವದೆಹಲಿ,ಜ.31- ಜೇಬಿನಲ್ಲಿ ಹಣವಿಲ್ಲದಿದ್ದರೆ ಹೋಟೆಲ್ ನಲ್ಲಿ ಅರ್ಧ ಕಾಫಿ ಕುಡಿಯಲು ಹಿಂಜರಿಯುವ ಎಷ್ಟೋ ಉದಾಹರಣೆ ಕಂಡು,ಕೇಳಿದ್ದೇವೆ. ಅದರೆ ಇಲ್ಲೊಬ್ಬ ಮಹಿಳೆ 41 ರೂಪಾಯಿ ಇಟ್ಟುಕೊಂಡು ಪಂಚತಾರಾ ಹೋಟೆಲ್ ನಲ್ಲಿ ತಂಗಿ ಬಿಲ್ ಪಾವತಿಸದೆ ರಂಪಾಟ ಮಾಡಿದ್ದಾರೆ ರಾಜಧಾನಿ ನವದೆಹಲಿಯ ಐಷಾರಾಮಿ ಹೋಟೆಲ್ ಗೆ ಬಂದ ಆಂಧ್ರ ಮೂಲದ ಮಹಿಳೆಯೊಬ್ಬರು,ತಾವು ವ್ಯವಹಾರ ಕಾರಣಕ್ಕೆ ಬಂದಿದ್ದೇನೆ ತಮ್ಮ ಹೋಟೆಲ್ ನಲ್ಲಿ ಉಳಿದುಕೊಳ್ಳುತ್ತೇನೆ ಎಂದು ಹೇಳಿ,ಕೆಲವು ದಾಖಲೆಗಳನ್ನು ನೀಡಿ ಕೊಠಡಿ ಪಡೆದುಕೊಂಡಿದ್ದಾರೆ.
ಇಶಾ ದವೆ ಹೆಸರಿನಲ್ಲಿ ಗುರತಿನ ಚೀಟಿ ಸೇರಿದಂತೆ ಹಲವು ದಾಖಲೆ ನೀಡಿದ್ದಾರೆ.
ದೆಹಲಿಯ ಏರೋಸಿಟಿಯಲ್ಲಿರುವ ಪುಲ್‌ಮನ್ ಹೋಟೆಲ್ ನಲ್ಲಿ 15 ದಿನಗಳ ಕಾಲ ತಂಗಿದ್ದ ಈ ಮಹಿಳೆ ಹಲವಾರು ಸೇವೆ ಪಡೆದಿದ್ದಾರೆ.ಇದಕ್ಕೆ ಹೋಟೆಲ್ ಬರೋಬ್ಬರಿ 6 ಲಕ್ಷ ರೂ. ಬಿಲ್ ಮಾಡಿದೆ.
ಈ ಹಣವನ್ನು ಐಸಿಐಸಿಐ ಬ್ಯಾಂಕ್ ಯುಪಿಐ ಆ್ಯಪ್ ಮೂಲಕ ಹಣ ಕಳುಹಿಸುತ್ತಿರುವುದಾಗಿ ಹೋಟೆಲ್ ಸಿಬ್ಬಂದಿಗೆ ತೋರಿಸಿದ್ದಾರೆ.
ಹಣ ಪಾವತಿಯಾಗಿದೆ ಎಂದು ನಂಬಿದ ಹೋಟೆಲ್ ಸಿಬ್ಬಂದಿ ಮಹಿಳೆ ಚೆಕ್ ಔಟ್ ಮಾಡಲು ನೆರವು ನೀಡಿದ್ದಾರೆ. ಅವರು ಹೋಟೆಲ್ ಬಿಟ್ಟು ಹೋದ ನಂತರ ಹೋಟೆಲ್ ನ ಖಾತೆ ನೋಡಿದಾಗ ಬ್ಯಾಂಕ್‌ಗೆ ಯಾವುದೇ ಹಣ ಪಾವತಿಯಾಗಿಲ್ಲ ಎಂದು ತಿಳಿಸಿದೆ.
ಕೂಡಲೇ ಹೋಟೆಲ್ ಸಿಬ್ಬಂದಿ ಆಕೆಯನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ, ಆಕೆ ಸಂಪರ್ಕಕ್ಕೆ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ಪರಿಶೀಲನೆಗೊಳಪಡಿಸಿದಾಗ ಎಲ್ಲರೂ ಶಾಕ್ ಆಗಿದ್ದಾರೆ.ಹೋಟೆಲ್ ಬಿಲ್ ಪಾವತಿಸದೆ ಓಡಿ ಹೋಗಿದ್ದ ಮಹಿಳೆಯ ಬ್ಯಾಂಕ್ ಖಾತೆಯಲ್ಲಿದ್ದ ಹಣ ನೋಡಿದರೆ ಆಕೆಯ ಖಾತೆಯಲ್ಲಿ ಕೇವಲ 41 ರೂ. ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಇಶಾ ದವೆ ಹೆಸರಿನ ಈ ಮಹಿಳೆಯ ಹೆಸರು ಝಾನ್ಸಿ ರಾಣಿ ಸ್ಯಾಮ್ಯುಯೆಲ್.ಆದರೆ ಈಕೆ ಇಶಾ ದವೆಹೆಸರಿನಲ್ಲಿ ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿ ಹೋಟೆಲ್‌ನ ಸ್ಪಾ ಸೌಲಭ್ಯದಲ್ಲಿ 2,11,708 ರೂಪಾಯಿ ಮೌಲ್ಯದ ಸೇವೆಗಳನ್ನು ಪಡೆದಿದ್ದಾಳೆ ಎಂದು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ.
ಆಕೆ ಬಳಸಿರುವ ಆ್ಯಪ್ ಬಗ್ಗೆ ಸಂಶಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಹಿಳೆ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ತಾನು ವೈದ್ಯೆ ಮತ್ತು ತನ್ನ ಪತಿಯೂ ವೈದ್ಯನಾಗಿದ್ದು ನ್ಯೂಯಾರ್ಕ್‌ನಲ್ಲಿ ವಾಸವಾಗಿರುವುದಾಗಿ ಪೊಲೀಸರಿಗೆ ಆರಂಭದಲ್ಲಿ ತಿಳಿಸಿದ್ದಾಳೆ. ಆದರೆ ಆ ಮಾಹಿತಿ ಸತ್ಯವೋ, ಸುಳ್ಳೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೋಟೆಲ್ ಸಿಬ್ಬಂದಿ ಪಿಸಿಆರ್ ಕರೆ ಮಾಡಿದ ನಂತರ ಜನವರಿ 13 ರಂದು ದೆಹಲಿ ಪೊಲೀಸರು ಸ್ಯಾಮ್ಯುಯೆಲ್ ಅವರನ್ನು ಬಂಧಿಸಿದ್ದರು. ಐಪಿಸಿ ಸೆಕ್ಷನ್ 419, 468, 471 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.