ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆ ಅಕ್ರಮದ ಆಳ ಬಗೆದಷ್ಟು ಆಳವಾಗುತ್ತಲೇ ಇದೆ. ಈ ವಿಷಯವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಗೆ ಬೆವರಿಳಿಸಿದ್ದಾರೆ.
ಕಾಂಗ್ರೆಸ್ ಯುವ ನಾಯಕ ಪ್ರಿಯಾಂಕ್ ಖರ್ಗೆ ಈ ಹಗರಣದ ಬಗ್ಗೆ ಮಾಹಿತಿ ಹೊರ ಹಾಕುತ್ತಿದ್ದಂತೆ ಸಿಎಂ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಕರೆದು ವಿವರಣೆ ಪಡೆದಿದ್ದರು.ಆಗ ಸುದೀರ್ಘ ವರದಿಯೊಂದನ್ನು ಒಪ್ಪಿಸಿದ್ದ ಪ್ರವೀಣ್ ಸೂದ್ ಇದರಲ್ಲಿ ಇಲಾಖೆಯ ಪಾತ್ರ ಏನೂ ಇಲ್ಲ. ಇಲಾಖೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಪರೀಕ್ಷಾ ಕೇಂದ್ರವನ್ನು ಗೊತ್ತು ಪಡಿಸುತ್ತದೆ. ನಂತರ ಪ್ರಶ್ನೆಪತ್ರಿಕೆ ಸಿದ್ದ ಪಡಿಸಿ ರವಾನಿಸುವುದನ್ನು ಬಿಟ್ಟರೆ ಬೇರೆನೂ ಮಾಡುವುದಿಲ್ಲ ಅಕ್ರಮಕ್ಕೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರೆನ್ನಲಾಗಿದೆ.
ಪರೀಕ್ಷೆಯಲ್ಲಿ ನಡೆದ ಅಕ್ರಮಗಳೆಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸೀಮಿತವಾದವು. ನೇಮಕಾತಿ ವಿಭಾಗದಲ್ಲಿ ಯಾವುದೇ ರೀತಿಯ ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ಈ ವಿಭಾಗದಲ್ಲಿ ಅಷ್ಟೊಂದು ಶಿಸ್ತು ಮತ್ತು ಕಠಿಣ ನಿಯಮಗಳಿವೆ ನಮ್ಮ ನೇಮಕಾತಿ ವಿಭಾಗ ದೇಶಕ್ಕೆ ಮಾದರಿಯಾಗಿದೆ ಎಂದು ಪ್ರವೀಣ್ ಸೂದ್ ಹೇಳಿದ್ದು, ಅದನ್ನು ನಂಬಿದ ಸಿಎಂ ಹಾಗಾದರೆ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮವೆಸಗಿದವರನ್ನು ಬಲಿ ಹಾಕಿ ಎಂದು ಹೇಳಿ ಪ್ರವಿಣ್ ಸೂದ್ ಅವರನ್ನು ಪ್ರಶಂಸಿದರೆಂದು ಮೂಲಗಳು ತಿಳಿಸಿವೆ.
ಇದಾದ ನಂತರ ಅಕ್ರಮದ ಜಾಲ ಕಲಬುರಗಿಯಿಂದ ಬೆಂಗಳೂರನ್ನು ತಲುಪುತ್ತಿದ್ದಂತೆ ಸಿಎಂ ಕೆಂಡಾಮಂಡಲರಾದರು. ತನಿಖಾಧಿಕಾರಿಗಳನ್ನು ಕಚೇರಿಗೆ ಕರೆಯಿಸಿಕೊಂಡು ಮಾಹಿತಿ ಪಡೆದುಕೊಂಡರು ಇವರು ನೀಡಿದ ಮಾಹಿತಿ ಕೇಳಿ ಸಿಎಂ ಬೆಚ್ಚಿಬಿದ್ದರೆನ್ನಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಅಕ್ರಮ ನಡೆದಿದೆ ಎಂಬ ಪೊಲೀಸ್ ಮಹಾನಿರ್ದೇಶಕರ ವರದಿ ನಂಬಿದ್ದ ಸಿಎಂ ಈ ಕರ್ಮಕಾಂಡ ಪ್ರವೀಣ್ ಸೂದ್ ಕಾಲ ಬುಡದಲ್ಲಿ ನಡೆದಿದೆ ಎಂಬುದನ್ನು ಕೇಳಿ ಕೆಂಡಾಮಂಡಲರಾದರೆನ್ನಲಾಗಿದೆ.
ಅಕ್ರಮದ ಬಹುತೇಕ ಎಲ್ಲಾ ಒಎಂಆರ್ ಪ್ರತಿಗಳನ್ನು ಡಿ.ಜಿ.ಕಚೇರಿಯ ನೇಮಕಾತಿ ವಿಭಾಗದಲ್ಲೇ ತಿದ್ದಲಾಗಿದೆ. ತಿದ್ದಲ್ಪಟ್ಟಿರುವ ಒಎಂಆರ್ ಪ್ರತಿಗಳಲ್ಲಿ ಎರಡು ಮೂರು ಬಗೆಯ ಇಂಕ್ ಬಳಕೆಯಾಗಿದೆ. ಪ್ರತಿಯೊಂದು ಒಎಮ್ ಅರ್ ಮೇಲೆ ಎಳೆಂಟು ಬೆರಳಚ್ಚಿನ ಗುರುತುಗಳಿರುವುದನ್ನು ಸಿಐಡಿ ತನಿಖಾ ತಂಡ ಪತ್ತೆ ಹಚ್ಚಿದ್ದು ಎಲ್ಲವನ್ನೂ ಸಿಎಂ ಗಮನಕ್ಕೆ ತಂದಿದೆ.
ಈ ವಿಷಯ ತಿಳಿದ ಸಿಎಂ ಪೊಲೀಸ್ ಮಹಾನಿರ್ದೇಶಕರನ್ನು ತಮ್ಮ ಕೊಠಡಿಗೆ ಕರೆಯಿಸಿಕೊಂಡು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರೆನ್ನಲಾಗಿದೆ. ನಿಮ್ಮ ಕಾಲ ಬುಡದಲ್ಲೇ ಬ್ರಹ್ಮಾಂಡ ಕರ್ಮಕಾಂಡ ನಡೆಯುತ್ತಿದ್ದರೂ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿರಾ.. ಈ ಒಂದು ಪ್ರಕರಣ ಸಾಕಲ್ಲವೇ ನೀವು ಎಷ್ಟು ಸಮರ್ಥ, ದಕ್ಷ ಅಧಿಕಾರಿ ಎಂದು ಗೊತ್ತಾಗಲು, ನಿಮ್ಮ ಅಧೀನದಲ್ಲಿರುವ ಹಿರಿಯ ಅಧಿಕಾರಿಯ ಕೃಪಾಶೀರ್ವಾದವಿಲ್ಲದೆ ಇದು ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರೆನ್ನಲಾಗಿದೆ.
ನೇಮಕಾತಿಯಲ್ಲಿ ರಾಜಕಾರಣಿಗಳಿದ್ದಾರೆಂದು ದಾರಿ ತಪ್ಪಿಸುತ್ತೀರಾ.. ಹಿರಿ-ಕಿರಿಯ ಅಧಿಕಾರಿಗಳು ಇದನ್ನೇ ಕಸುಬಾಗಿಸಿಕೊಂಡರು ನಿಮ್ಮ ಗುಪ್ತದಳ ಮಾಹಿತಿ ನೀಡಲಿಲ್ಲವೇ..? ನಿಮ್ಮ ಕಚೇರಿಯ ಪಕ್ಕದಲ್ಲೇ ನಡೆದ ಕರ್ಮಕಾಂಡ ನಿಮಗೆ ಗೊತ್ತಾಗಲಿಲ್ಲ ಎಂದರೆ ರಾಜ್ಯದ ವಿದ್ಯಮಾನ ಹೇಗೆ ತಿಳಿದುಕೊಳ್ಳುತ್ತೀರಾ ಎಂದು ಪ್ರಶ್ನಿಸಿ ಬೆವರಿಳಿಸಿದರೆನ್ನಲಾಗಿದೆ.
ಈ ಅಕ್ರಮದ ಬಗ್ಗೆ ಸಬೂಬು ಸಮಜಾಯಿಷಿಗಳು ಬೇಕಿಲ್ಲ ತಪ್ಪಿತಸ್ಥರು ಜೈಲು ಸೇರಬೇಕಷ್ಟೆ ನಿಮ್ಮಂತಹವರ ಅಸಮರ್ಥತೆಯ ಕಾರಣಕ್ಕೆ ಸರ್ಕಾರ ಕೆಟ್ಟ ಹೆಸರು ಪಡೆಯಬೇಕಾಗಿದೆ ನನಗೆ ದಿಟ್ಟ ಉತ್ತರ ಸ್ಪಷ್ಟ ಫಲಿತಾಂಶ ಬೇಕಿದೆ ಎಂದು ಹೇಳಿ ಅವರಿಂದ ಯಾವ ಸ್ಪಷ್ಟನೆಯನ್ನೂ ಕೇಳದೆ ಬೆವರಿಳಿಸಿ ಕಳುಹಿಸಿದರೆನ್ನಲಾಗಿದೆ.
ಇದೀಗ ಮುಖ್ಯಮಂತ್ರಿಗಳು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಬೆವರಳಿಸಿದ್ದು ಪೊಲೀಸ್ ಪಡಸಾಲೆಯಲ್ಲಿ ಗುಸುಗಸು ಸುದ್ದಿಗೆ ಗ್ರಾಸವಾಗಿದೆ..
Previous Articleನಟರಿಗೆ ಇರುವ ಮಾನ್ಯತೆ, ನಟಿಯರಿಗೆ ಇಲ್ಲ – ನಟಿ ರಮ್ಯ
Next Article ಜೆಡಿಎಸ್ ಪಂಚರತ್ನ ಯಾತ್ರೆ