ಬೆಂಗಳೂರು, ನ.18- ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಧಗದಗಿಸುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರ ಆಯ್ಕೆಯಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಾಖ್ಯಾನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಫಲಿತಾಂಶ ಬಂದ ಆರು ತಿಂಗಳ ನಂತರ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿ ಬಿಜೆಪಿ ಪ್ರಜಾಪ್ರಭುತ್ವಕ್ಕೆ ಗೌರವ ಕೊಟ್ಟಿದೆ. ಆದರೆ ಈ ಆಯ್ಕೆ ವೇಳೆ ಅವರದೇ ಪಕ್ಷದ ಶಾಸಕರು ಮಾಡಿರುವ ಆರೋಪಗಳಿಗೆ ಬಿಜೆಪಿ ನಾಯಕರು ಸಾರ್ವಜನಿಕವಾಗಿ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಹಿಂದೆ ಅಶೋಕ್ ಅವರಿಗೆ ಮಂಡ್ಯದಲ್ಲಿ ಗೋಬ್ಯಾಕ್ ಎಂಬ ಪೋಸ್ಟರ್ ಹಾಕಲಾಗಿತ್ತು. ಮತ್ತೆ ಬಿಜೆಪಿ ಕಚೇರಿಯಿಂದ ಗೋಬ್ಯಾಕ್ ಅಶೋಕ್ ಪೋಸ್ಟರ್ ಬರಬಹುದು ಎಂದು ವ್ಯಂಗ್ಯವಾಡಿದ ಅವರು,
ಬಿಜೆಪಿಯನ್ನು ಒಂದು ಕುಟುಂಬದ ಪಕ್ಷವಾಗಲು ಬಿಡುವುದಿಲ್ಲ. ಬೆಟ್ಟದ ಹುಲಿ ಮಾಡಬೇಡಿ, ರಾಜ್ಯಾಧ್ಯಕ್ಷ ಸ್ಥಾನದ ಖರೀದಿಗೆ ಬಂದಿದ್ದರು ಎಂಬೆಲ್ಲ ಹೇಳಿಕೆಯನ್ನು ಅವರದೇ ಪಕ್ಷದವರು ನೀಡಿದ್ದಾರೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಎಷ್ಟು ಕೊಟ್ಟರು ಎಂದು ಪ್ರಶ್ನಿಸಿದರು
ಆದರೂಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಆರ್.ಅಶೋಕ್ ಅವರಿಗೆ ಅಭಿನಂದಿಸುತ್ತೇನೆ. ಈ ಆಯ್ಕೆಯಿಂದ ಕಾಂಗ್ರೆಸ್‍ಗೆ ಖುಷಿಯಾಗಿದೆ. ಆದರೆ ಬಿಜೆಪಿಗೆ ಸಂತೋಷವಿಲ್ಲ. ಚಾಪ್ಟರ್-2 ಸುಲಭವಾಗಲಿದೆ ಎಂದರು.
ಕಾದು ನೋಡಿ:
ಮತ್ತೊಂದೆಡೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ,ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರ ಆಯ್ಕೆಯ ನಂತರ ಅಸಮಾಧಾನಗಳು ಹೊರ ಬಂದಿದ್ದು, ಸ್ವಲ್ಪ ದಿನ ಕಾದು ನೋಡಿದರೆ ಮತ್ತಷ್ಟು ಬೆಳವಣಿಗೆಗಳಾಗುತ್ತವೆ ಎಂದು ಭವಿಷ್ಯ ನುಡಿದರು.
ಪ್ರತಿಪಕ್ಷದ ನಾಯಕರು ಯಾರಾದರೂ ನಮಗೆ ಅಭ್ಯಂತರವಿಲ್ಲ. ಅದು ಅವರ ಪಕ್ಷಕ್ಕೆ ಸಂಬಂಧಿಸಿದ ವಿಷಯ. ಜನರ ಆಶೀರ್ವಾದದಿಂದ ಸರ್ಕಾರ ರಚಿಸಿರುವ ನಮ್ಮ ಕಾಂಗ್ರೆಸ್ ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುತ್ತಿದೆ. ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡದೇ, ಶಾಂತಿಯುತವಾದ ವಾತಾವರಣವನ್ನು ಸರ್ಕಾರ ನಿರ್ಮಿಸುತ್ತಿದೆ ಎಂದು ಆಪಾದಿಸಿದರು.
ಕಾಂಗ್ರೆಸ್ ವಿರುದ್ಧ ಬಿಜೆಪಿ ಪೋಸ್ಟರ್ ಚಳವಳಿ ಪ್ರಾರಂಭಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಯವರು, ಜನ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವ ಕನಸು ಕಂಡಿದ್ದರು. ಆದರೆ ಜನ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿರುವುದು ಅವರನ್ನು ಆತಂಕಕ್ಕೆ ದೂಡಿದ್ದು, ಇದರಿಂದ ಹತಾಶರಾದ ಅವರು ಅರ್ಥವಿಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು.