ಬೆಂಗಳೂರು, ಫೆ.3-
ಅಧಿಕಾರಿಗಳ ಡಿಜಿಟಲ್ ಸಹಿಯನ್ನು ನಕಲು ಮಾಡಿ ದುರ್ಬಳಕೆ ಮಾಡಿಕೊಂಡು, ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಲಕ್ಷಾಂತರ ರೂಗಳನ್ನು ಗುಳಂ ಮಾಡುತ್ತಿದ್ದ ರಾಮನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ ದರ್ಜೆಯ ನೌಕರ ಸೇರಿದಂತೆ ಒಟ್ಟು 8 ಮಂದಿಯ ವಿರುದ್ಧ FIR ದಾಖಲಾಗಿದೆ. ಆರೋಪಿಗಳು ಸುಮಾರು 76 ಲಕ್ಷ ರೂ. ಹಣವನ್ನು ದುರುಪಯೋಗ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಅಧಿಕಾರಿಗಳ ನಕಲಿ ಸಹಿ ಹಾಗೂ ಖಜಾನೆ -2 ಡಿಎಸ್ ಡಿಜಿಟಲ್ ಕೀ ಬಳಸಿ ಹಣ ಕಬಳಿಸಿದ್ದಾರೆ. ವಂಚಿಸಿದ ಹಣವನ್ನು ತನ್ನ ಹೆಂಡತಿ, ಸಂಬಂಧಿಕರ ಖಾತೆಗೆ ಮಂಜುನಾಥ್ ಜಮಾವಣೆ ಮಾಡಿಕೊಂಡಿದ್ದ. ಅಂದಹಾಗೆ ಆರೋಪಿ ಮುಂಜುನಾಥ್ ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ನಲ್ಲಿ ಡಿ ಗ್ರೂಪ್ ನೌಕರನಾಗಿದ್ದ. ಬಳಿಕ ಆತನನ್ನು ರಾಮನಗರ ತಾಲೂಕು ಕಚೇರಿಯಲ್ಲಿ ಡಿ-ದರ್ಜೆ ಸಿಬ್ಬಂದಿಯಾಗಿ ಖಜಾನೆ ಕೆಲಸಗಳನ್ನು ನೋಡಿಕೊಳ್ಳಲು ನೇಮಿಸಲಾಗಿತ್ತು.
ಅಲ್ಲಿನ ವಿಚಾರಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದ ಮಂಜುನಾಥ್, 2019 ರಿಂದ 2022ರ ವರೆಗೂ ಹಣವನ್ನು ವಂಚಿಸಿದ್ದಾನೆ. ಕಳ್ಳತನ ಮಾಡಿದ ಹಣದಲ್ಲಿ ಮನೆ ಕಟ್ಟಿಕೊಂಡು ಇನ್ನುಳಿದ ಹಣವನ್ನು ಜೂಜಿನಲ್ಲಿ ಕಳೆದಿದ್ದಾನೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿ ಮಂಜುನಾಥ್ ಪೋಲಿಸರ ವಶದಲ್ಲಿದ್ದಾನೆ.