ಬೆಂಗಳೂರು – ನಿಗಧಿತ ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶಿವಕುಮಾರ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದಲ್ಲಿ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ‘ಸಿಬಿಐ ಮೂರು ತಿಂಗಳಲ್ಲಿ ತನ್ನ ತನಿಖೆ ಪೂರ್ಣಗೊಳಿಸಿ, ವಿಚಾರಣಾ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.
ಈ ಆದೇಶವನ್ನು ಸ್ವಾಗತಿಸುವುದಾಗಿ ಹೇಳಿರುವ ಡಿ.ಕೆ.ಶಿವಕುಮಾರ್ ಸಿಬಿಐ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಯ ಪ್ರಕರಣದ ಕುರಿತು ಸಿಬಿಐ ಪರ ವಕೀಲರು ಮಾಡಿದ ವಾದವನ್ನು ಮನ್ನಿಸಿರುವ ನ್ಯಾಯಪೀಠ, ಶಿವಕುಮಾರ್ ತನಿಖೆ ರದ್ದುಪಡಿಸುವಂತೆ ತಡವಾಗಿ ಅರ್ಜಿ ಸಲ್ಲಿದ್ದಾರೆ. ಆದರೆ, ತನಿಖೆ ಈಗಾಗಲೇ ಭಾಗಶಃ ಪೂರ್ಣಗೊಂಡಿದೆ. ತನಿಖೆಗೆ ಹಾಜರಾಗಿ ಅವರು ತಮ್ಮ ವಿವರಣೆ ಮತ್ತು ಹೇಳಿಕೆಯನ್ನೂ ದಾಖಲಿಸಿದ್ದಾರೆ. ಇದನ್ನೆಲ್ಲಾ ದಾಖಲಿಸಿಕೊಂಡಿರುವ ತನಿಖಾಧಿಕಾರಿ ಪ್ರಕರಣದ ಪರಿಶೀಲನೆಯನ್ನೂ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯ ತನಿಖೆ ರದ್ದುಪಡಿಸಲು ಆಗದು” ಎಂದು ಅಭಿಪ್ರಾಯಪಟ್ಟಿದೆ.
ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದರೆ, ಅದನ್ನು ರದ್ದುಪಡಿಸಲು ಅಥವಾ ತಮ್ಮ ಮೇಲಿನ ಆರೋಪಗಳನ್ನು ಕೈ ಬಿಡುವಂತೆ ಕೋರಲು ಶಿವಕುಮಾರ್ ಸ್ವತಂತ್ರರಾಗಿದ್ದಾರೆ’ ಎಂದು ನ್ಯಾಯಪೀಠ ಹೇಳಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಕಲಂಗಳ ಅಡಿಯಲ್ಲಿ ಸಿಬಿಐ 2020ರ ಅಕ್ಟೋಬರ್ 3ರಂದು ಡಿ.ಕೆ. ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿತ್ತು.
‘ಈ ನಡುವೆ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ಕಾನೂನು ಬಾಹಿರವಾಗಿದ್ದು ಅದನ್ನು ರದ್ದುಪಡಿಸಬೇಕು’ ಎಂದು ಕೋರಿ ಶಿವಕುಮಾರ್ 2022ರ ಜುಲೈನಲ್ಲಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ 2023ರ ಫೆಬ್ರುವರಿ 10ರಂದು ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿತ್ತು. ಇಲ್ಲಿಯವರೆಗೂ ಈ ತಡೆಯಾಜ್ಞೆಯನ್ನು ವಿಸ್ತರಿಸಿಕೊಂಡು ಬರಲಾಗಿತ್ತು.
ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಿದ್ದ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಮತ್ತೊಂದು ರಿಟ್ ಅರ್ಜಿಯನ್ನೂ ಇದೇ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಕೆಲ ತಿಂಗಳ ಹಿಂದಷ್ಟೇ ವಜಾ ಮಾಡಿತ್ತು.
ತನಿಖೆಗೆ ಸಂಪೂರ್ಣ ಸಹಕಾರ:
ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ತನಿಖಾ ಪ್ರಕ್ರಿಯೆಯಲ್ಲಿ ನಾನು ಸಹಕಾರ ನೀಡುತ್ತೇನೆ. ಈ ದೇಶದ ಕಾನೂನನ್ನು ಗೌರವಿಸುತ್ತೇನೆ. ನಾನು ಏನೂ ತಪ್ಪು ಮಾಡಿಲ್ಲ ಎನ್ನುವುದು ನನಗೆ ತಿಳಿದಿದೆ. ನಾನು ಶುದ್ಧವಾಗಿದ್ದೇನೆ. ಇದು ಬಿಜೆಪಿಯ ಸೇಡಿನ ರಾಜಕಾರಣ. ಆದ್ದರಿಂದಲೇ ಸರ್ಕಾರ ತನಿಖೆಗೆ ಆದೇಶಿಸಿತ್ತು ಎಂದು ಹೇಳಿದರು.
ಪ್ರಕರಣದಲ್ಲಿ ಶೇಕಡ 90ರಷ್ಟು ತನಿಖೆ ಪೂರ್ಣಗೊಳಿಸಿದ್ದೇವೆ ಎಂದುಸಿಬಿಐ, ನ್ಯಾಯಾಲಯಕ್ಕೆ ಹೇಳಿದೆ. ಆದರೆ, ಒಮ್ಮೆಯೂ ಅವರು ನನ್ನನ್ನು ವಿಚಾರಣೆಗೆ ಕರೆದಿಲ್ಲ ಎಂದು ತಿಳಿಸಿದರು.
‘ನನಗೆ ಮತ್ತು ನನ್ನ ಹೆಂಡತಿಗೆ ಸೇರಿದ ಆಸ್ತಿಗಳ ಬಗ್ಗೆ ವಿಚಾರಣೆ ನಡೆಸಬೇಕು, ಆದರೆ ಅವರು ಈವರೆಗೆ ವಿಚಾರಣೆಗೆ ಕರೆದಿಲ್ಲ. ಆದರೂ ಅವರು ಶೇಕಡ 90ರಷ್ಟು ತನಿಖೆ ಪೂರ್ಣಗೊಳಿಸಿದ್ದು ಹೇಗೆ ಎಂದು ನನಗೆ ಅರ್ಥವಾಗುತ್ತಿಲ್ಲ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ, ನಾನು ಕಾನೂನಿನ ಚೌಕಟ್ಟಿನೊಳಗಿದ್ದೇನೆ. ಆ ಚೌಕಟ್ಟಿನೊಳಗೆ ಪ್ರತಿಕ್ರಿಯಿಸುತ್ತೇನೆ. ಬಿಜೆಪಿಯ ಪಿತೂರಿ ಏನೇ ಇರಲಿ, ನ್ಯಾಯಾಲಯವಿದೆ. ನನ್ನ ದಾಖಲೆಗಳ ಮೂಲಕ ಪ್ರತಿಕ್ರಿಯಿಸುತ್ತೇನೆ’ ಎಂದು ಹೇಳಿದರು.