ಬೆಂಗಳೂರು, ಜ.10- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಬೇಕಾದರೆ ರಾಜ್ಯ ಸರ್ಕಾರದಲ್ಲಿ ಮೂವರು ಹೆಚ್ಚುವರಿ ಉಪಮುಖ್ಯಮಂತ್ರಿಗಳ (DK Shivakumar) ಹುದ್ದೆ ಸೃಷ್ಟಿಸಬೇಕು ಎಂಬ ಬೇಡಿಕೆ ಇದೀಗ ಕಾಂಗ್ರೆಸ್ ನಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಲಿಂಗಾಯತ ಸಮುದಾಯಕ್ಕೆ ಸೇರಿದ ಮೂರನ್ನು ಉಪಮುಖ್ಯಮಂತ್ರಿ ಮಾಡಬೇಕೆಂಬ ಪ್ರಸ್ತಾಪದ ಹಿಂದೆ ಹಾಲಿ ಉಪ ಮುಖ್ಯಮಂತ್ರಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕೈ ಕಟ್ಟಿ ಹಾಕುವ ತಂತ್ರ ಇದುನೆಂದು ವ್ಯಾಖ್ಯಾನಿಸಲಾಗುತ್ತಿದೆ.
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಕಾರ್ಯತಂತ್ರದ ಕುರಿತು ಚರ್ಚಿಸಲು ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕರು ಉಪ ಮುಖ್ಯಮಂತ್ರಿ ಸೃಷ್ಟಿಯ ಪ್ರಸ್ತಾಪ ಮಂಡಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಡಿ.ಕೆ.ಶಿವಕುಮಾರ್ (DK Shivakumar) ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದ್ದೇ ಆದರೆ ತಾವು ಸಂಪುಟದಿಂದ ಹೊರಗಿರುವುದಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ದೆಹಲಿಯಿಂದ ಆಗಮಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ಬಳಿ ಉಪ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ತಮ್ಮ ಬೇಡಿಕೆಯನ್ನು ಮಂಡಿಸಿದ್ದಾರೆ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸದೇ ಇದ್ದರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಇದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಹೈಕಮಾಂಡ್‍ಗೆ ತಮ್ಮ ನಿಲುವನ್ನು ತಿಳಿಸಿದ್ದು, ಪಕ್ಷಕ್ಕೆ ಅನುಕೂಲವಾಗುವುದಾದರೆ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಸಿದ್ದೇ ಆದರೆ ತಾವು ಪ್ರಸ್ತುತ ಹುದ್ದೆಯಲ್ಲಿ ಮುಂದುವರೆಯುವುದಿಲ್ಲ. ಹೈಕಮಾಂಡ್ ಬಯಸುವುದಾದರೆ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತೇನೆ. ಬೇಡ ಎಂದರೆ ಅದನ್ನೂ ತ್ಯಜಿಸಲು ಸಿದ್ಧ ಎಂದು ಖಡಕ್ ಸಂದೇಶ ನೀಡಿದ್ದಾರೆ ಎಂದು ಗೊತ್ತಾಗಿದೆ.
ಸುರ್ಜೇವಾಲಾ ಅವರಿಗೆ ತಮ್ಮ ನಿಲುವು ತಿಳಿಸಿರುವ ಶಿವಕುಮಾರ್ ಇದನ್ನು ಪಕ್ಷದ ನಾಯಕರಾದ ರಾಹುಲ್ ಗಾಂಧಿ,ಖರ್ಗೆ ಮತ್ತು ವೇಣುಗೋಪಾಲ್ ಅವರಿಗೆ ರವಾನಿಸುವಂತೆ ಮನವಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.