ಬೆಂಗಳೂರು,ಜ.24-
‘ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ವ್ಯಾಪಕ ಪ್ರಮಾಣದ ಭ್ರಷ್ಟಾಚಾರ ನಡೆದಿತ್ತು ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿರುವ ಬಿಜೆಪಿಯವರು ಮೂರುವರೆ ವರ್ಷಗಳ ವರೆಗೆ ಈ ಬಗ್ಗೆ ತನಿಖೆ ಮಾಡಿಸದೆ ಕಡ್ಲೆಕಾಯಿ ತಿನ್ನುತ್ತಿದ್ದರಾ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಮೂರುವರೆ ವರ್ಷಗಳಿಂದ ನೀವೇ ಆಡಳಿತ ಮಾಡುತ್ತಿದ್ದೀರಾ. ಈ ಬಗ್ಗೆ ತನಿಖೆ ಮಾಡಿಸಬೇಕಿತ್ತು’ ಎಂದಿದ್ದಾರೆ.
‘ಬಿಜೆಪಿ ನಾಯಕರ ಮಧ್ಯೆ ಆಂತರಿಕ ಜಗಳ ಜೋರಾಗಿದೆ. ಹಾಗಾಗಿ, ಕಾಂಗ್ರೆಸ್‌ನಲ್ಲಿದ್ದ ಸುಧಾಕರನ ಕೈಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ 35 ಸಾವಿರ ಕೋಟಿ ರೂ. ಆರೋಪವನ್ನು ಬಿಜೆಪಿಯವರು ಮಾಡಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯಿಂದ ಬಿಜೆಪಿ ನಾಯಕರ ತಲೆ ಕೆಟ್ಟು ಹೋಗಿದೆ. ಕಾಂಗ್ರೆಸ್ ಉಚಿತ ವಿದ್ಯುತ್, ಮನೆ ಯಜಮಾನಿಗೆ ಎರಡು ಸಾವಿರ ಯೋಜನೆ ಜಾರಿ ಭರವಸೆಯಿಂದ ತಲೆಕೆಡಿಸಿಕೊಂಡಿದ್ದಾರೆ. ಹೀಗಾಗಿ ಸುಳ್ಳು ಆರೋಪಗಳ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಯಡಿಯೂರಪ್ಪ-ಬೊಮ್ಮಾಯಿ, ಸಿ.ಟಿ ರವಿ, ಕಟೀಲು ಎಲ್ಲರ ನಡುವೆ ಜಗಳವಿದೆ. ಅದನ್ನು ವಿಷಯಾಂತರ ಮಾಡಲು ಸಚಿವ ಸುಧಾಕರ್ ಅವರಿಂದ ಸುಳ್ಳು ಆರೋಪಗಳನ್ನು ಮಾಡಿಸಲಾಗುತ್ತಿದೆ’ ಎಂದರು. ‘ಬಿಜೆಪಿಯವರು ತಾವು ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು. ‘ಸಚಿವ ಸುಧಾಕರ್ ವಿರುದ್ಧವೇ ದೊಡ್ಡ ಭ್ರಷ್ಟಾಚಾರದ ಆರೋಪವಿದೆ. ಕೋವಿಡ್ ಸಮಯದಲ್ಲಿ ಬೆಡ್ ಕೊಡುವುದರಲ್ಲೂ ಭ್ರಷ್ಟಾಚಾರವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಬಿಜೆಪಿಯವರ ಆಟ ಬಹಳ ದಿನ ನಡೆಯಲ್ಲ, ಇನ್ನು 49-50 ದಿನಗಳಷ್ಟೆ, ವಿಧಾನಸೌಧವನ್ನು ಗಂಜಲ ಹಾಗೂ ಡೆಟಾಲ್ ಹಾಕಿ ಕ್ಲೀನ್ ಮಾಡಿಸಬೇಕಿದೆ’ ಎಂದರು.
‘ಬಿಜೆಪಿಯಲ್ಲಿ ಎಂತೆಂಥಾ ನಾಯಕರಿದ್ದಾರೆ. ಅವರೆಲ್ಲ ಮಾತನಾಡುತ್ತಿಲ್ಲ ಸಚಿವ ಸುಧಾಕರ್‌ರಂಥವರು ಮಾತನಾಡುತ್ತಿರುವುದು ಹಾಸ್ಯಾಸ್ಪದ’ ಎಂದು ವ್ಯಂಗ್ಯವಾಡಿದರು.
Previous Articleಆಮ್ ಆದ್ಮಿಗೆ ನೂತನ ಸಾರಥಿಗಳು..
Next Article Karnataka ವಿಧಾನಸಭೆ Electionಗೆ ಮುಹೂರ್ತ ಫಿಕ್ಸ್.