ಬೆಂಗಳೂರು – ತೆರಿಗೆ ವಂಚನೆ ಆರೋಪದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಇತರೆ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಲೆಕ್ಕಪತ್ರ ಪರಿಶೀಲನೆ ನಡೆಸಿದರು.
ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಮತ್ತದರ ಅಂಗ ಸಂಸ್ಥೆಗಳ ಕಚೇರಿಗಳ ಮೇಲೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಸಿದರು.
ನ್ಯಾಷನಲ್ ಎಜುಕೇಷನ್ ಫೌಂಡೇಶನ್‌ಗೆ ಡಿ.ಕೆ.ಶಿವಕುಮಾರ್ ಮಾಲೀಕರಾದರೆ ಅವರ ಪುತ್ರಿ ಸೌಂದರ್ಯ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಿವಕುಮಾರ್ ನನಗೆ ಕಿರುಕುಳ ನೀಡುವುದೇ ಸಿಬಿಐ ಅಧಿಕಾರಿಗಳ ಉದ್ದೇಶ. ನಾನು ಯಾವುದೇ ತಪ್ಪು ಮಾಡಿಲ್ಲ, ಎಲ್ಲವೂ ಲೀಗಲ್ ಆಗಿದ್ದು, ಭಯಪಡುವ ಅಗತ್ಯವೇ ಇಲ್ಲ. ಸಿಬಿಐ ಅಧಿಕಾರಿಗಳು ಸಂಸ್ಥೆಗೆ ನೋಟಿಸ್ ನೀಡಿ ಮಾಹಿತಿ ಪಡೆದಿದ್ದಾರೆ. ಈ ದಾಳಿಯ ಹಿಂದೆ ರಾಜಕೀಯ ಉದ್ದೇಶವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ರಾಜಕೀಯ ದ್ವೇಷದಿಂದ ನನಗೆ ತೊಂದರೆ ಕೊಡುತ್ತಿದ್ದಾರೆ. ನಮ್ಮ ಸಂಸ್ಥೆಯಿಂದ ಕೆಲವು ದಾಖಲೆಗಳನ್ನು ಪಡೆದಿದ್ದಾರೆ. ನಾನು ತಪ್ಪು ಮಾಡಿಲ್ಲ. ಹಾಗಾಗಿ ನನಗೆ ಭಯವಿಲ್ಲ.ಆದರೆ ಇವರು ಕೊಡುತ್ತಿರುವ ಕಿರುಕುಳ ಒಂದೆರಡಲ್ಲ. ನಾನು ನಮ್ಮ ವಕೀಲರೊಬ್ಬರಿಗೆ 5 ಲಕ್ಷ ಕೊಟ್ಟಿದ್ದೆ. ಅವರಿಗೂ ನೋಟಿಸ್ ಕೊಟ್ಟು ಪೀಡಿಸುತ್ತಿದ್ದಾರೆ. ನಮ್ಮ ಜಮೀನಿಗೂ ಹೋಗಿ ಪರಿಶೀಲಿಸಿದ್ದಾರೆ. ತಹಸೀಲ್ದಾರ್ ಕಚೇರಿಗೂ ಹೋಗಿ ಮಾಹಿತಿ ಪಡೆದಿದ್ದಾರೆ ಎಂದು ಹೇಳಿದರು.