ಬೆಂಗಳೂರು,ಫೆ.2:
ನಾಯಕತ್ವ ಬದಲಾವಣೆ ವಿಚಾರದಲ್ಲಿ ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವ್ಯಕ್ತಿ ಒಬ್ಬನೇ ಇದ್ದರೂ ಕೂಡ ದೃಢವಾದ ನಿಲುವು ,ವಿಶ್ವಾಸ ಮತ್ತು ಸಂಕಲ್ಪ ಇದ್ದರೆ ಗುರಿ ಮುಟ್ಟುವುದು ನಿಶ್ಚಿತ ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಚರ್ಚೆಯಾದ ಅಧಿಕಾರ ಹಸ್ತಾಂತರ ಕುರಿತಾದ ಪ್ರಸ್ತಾವನೆಗಳಿಗೆ ಉತ್ತರ ನೀಡಿದ ಅವರು ಮುಖ್ಯಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ 139 ಮಂದಿ ಶಾಸಕರು ತಮ್ಮ ಪರವಾಗಿದ್ದಾರೆ ನಮ್ಮಲ್ಲಿ ಯಾವುದೇ ಬಣಗಳು ಇಲ್ಲ ಎಂದು ಘೋಷಿಸಿದರು
ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯ ಚಟುವಟಿಕೆಯಲ್ಲಿ ಗುರುತಿಸಿಕೊಂಡು ಬಂದಿರುವ ನನಗೆ ಅತ್ಯಂತ ಕಿರಿಯ ವಯಸ್ಸಿನಲ್ಲೇ ವಿಧಾನಸಭೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡಿತು ಸುಧೀರ್ಘ ಅವಧಿಗೆ ಶಾಸಕನಾಗಿದ್ದೇನೆ. ರಾಜಕಾರಣದಲ್ಲಿ ಎಲ್ಲ ರೀತಿಯ ಏಳು ಬೀಳುಗಳನ್ನು ಅನುಭವಿಸಿದ್ದೇನೆ ಜೈಲಿಗೆ ಹೋಗಿ ಬಂದಿದ್ದೇನೆ ಇಲ್ಲಿ ಯಾವುದೂ ಕೂಡ ಶಾಶ್ವತ ಅಲ್ಲ ಎಂದು ಹೇಳಿದರು.
ಅಧಿಕಾರಕ್ಕೆ ಬರುವ ಮುನ್ನ ನಾನು ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಭರವಸೆಗಳನ್ನು ನೀಡಿದ್ದೇವೆ ಅವುಗಳನ್ನು ಈಡೇರಿಸಲು ನಾವಿಬ್ಬರು ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ ಇದರಲ್ಲಿ ಯಾವುದೇ ರೀತಿಯ ಸಂಶಯಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ನಾಯಕತ್ವ ವಿಚಾರದ ಕುರಿತಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸಿರಿದಂತೆ ಹಲವರು ಮಾಡಿರುವ ಪ್ರಶ್ನೆಗಳ ಬಗ್ಗೆ ವಿಧಾಸಭೆಯಲ್ಲಿಯೇ ಪ್ರಸ್ತಾವಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಕ್ಕದಲ್ಲಿ ಕುಳಿತಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಉದ್ದೇಶಿಸಿ ಉತ್ತರ ಹೇಳಲು ಮುಂದಾದರು.
ಆಗ ತಕ್ಷಣವೇ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಇದಕ್ಕೆ ಕಾಲವೇ ಉತ್ತರ ನೀಡಲಿದೆ ಎಂದು ಹೇಳುವ ಮೂಲಕ ರಾಜಕೀಯ ಚರ್ಚೆಗೆ ನಾಂದಿ ಹಾಡಿದರು.
ಗೊಂದಲ:
ತಕ್ಷಣವೇ ಎದ್ದು ನಿಂತು ಮಾತನಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡುವ ಹೇಳಿಕೆ ಹಲವಾರು ಉತ್ತರ ಮತ್ತು ಗೊಂದಲಗಳಿಗೆ ಕಾರಣವಾಗುತ್ತದೆ ಇದು ಪ್ರತಿಪಕ್ಷಗಳಲ್ಲಿ ಮಾತ್ರವಲ್ಲ ಆಡಳಿತ ಪಕ್ಷದಲ್ಲೂ ಗೊಂದಲಕ್ಕೆ ಕಾರಣವಾಗಿದೆ ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಹೇಳಿದರು.
ಶಾಸಕರ ಮಾತುಗಳನ್ನು ನಂಬಿ ಹಾಳಾಗಬೇಡಿ, ಈ ಮೊದಲು ನಿಮ್ಮ ಜೊತೆ 56 ಮಂದಿ ಶಾಸಕರು ಇದ್ದರು ಎಂದು ಹೇಳಲಾಗಿತ್ತು ಆದರೆ ಅವರಲ್ಲ ಬೆಳಗ್ಗೆ ನಿಮ್ಮ ಜೊತೆ ಇರುತ್ತಾರೆ ಸಂಜೆ ಮುಖ್ಯಮಂತ್ರಿಗಳ ಮನೆಗೆ ಹೋಗಿರುತ್ತಾರೆ ಎಂಬ ಅಭಿಪ್ರಾಯವಿದೆ ನಿಮ್ಮ ಜೊತೆ ಯಾರಿದ್ದಾರೆ ಎಂದು ಹೇಳುತ್ತಿದ್ದಂತೆ ಎದ್ದು ನಿಂತ ಕಾರ್ಮಿಕ ಸಚಿವ ಸಂತೋಷ್ ಲಾಡ್ ನಾವೆಲ್ಲ ಪಕ್ಷದ ಶಾಸಕರು ಒಟ್ಟಾಗಿದ್ದೇವೆ ಎಂದರು.
ಅದಕ್ಕೆ ತಿರುಗೇಟು ನೀಡಿದ ಆರ್ ಅಶೋಕ್ ಇಂತಹವರ ಬಗ್ಗೆ ಎಚ್ಚರದಿಂದ ಇರಿ ಅವರು ರಾತ್ರಿ ವೇಳೆ ಮುಖ್ಯಮಂತ್ರಿಗಳ ಜೊತೆ ಇರುತ್ತಾರೆ ಬೆಳಗ್ಗೆ ನಿಮ್ಮ ಜೊತೆಗೆ ಇರುತ್ತಾರೆ ಇವರು ಅಪಾಯಕಾರಿ ಎಂದರೆ ಅದಕ್ಕೆ ಸಂತೋಷ್ ಲಾಡ್ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಒಟ್ಟಾಗಿದ್ದೇವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲ 139 ಮಂದಿ ಶಾಸಕರು ನನ್ನ ಜೊತೆ ಇದ್ದಾರೆ ಇದರಲ್ಲಿ ಯಾವುದೇ ಸಂಶಯ ಬೇಡ ದೃಢವಾದ ಸಂಕಲ್ಪ ವಿಶ್ವಾಸ ಮತ್ತು ಬದ್ಧತೆ ಇದ್ದರೆ ಒಬ್ಬ ಕೂಡ 139 ಆಗಬಹುದು ಎಂದು ಹೇಳಿದರು.

