ಬೆಂಗಳೂರು, ಮೇ26 – ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡದೆ ಜನರಿಗೆ ಮೋಸ ಮಾಡುತ್ತಿದೆ. ಯಾರು ವಿದ್ಯುತ್ ಬಿಲ್ ಕಟ್ಟಬೇಡಿ, ಹಾಗೆಯೇ ಮಹಿಳೆಯರು ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿ ಎಂದು ರಾಜ್ಯದ ಜನತೆಗೆ ಬಿಜೆಪಿ ಮತ್ತು ಜೆಡಿಎಸ್ ಕರೆ ನೀಡಿವೆ
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರಾದ ಆರ್ ಅಶೋಕ್, ಗೋವಿಂದ ಕಾರಗೋಳ್ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಯಾರೂ ವಿದ್ಯುತ್ ಬಿಲ್ ಕಟ್ಟಬಾರದು ಎಂದು ಹೇಳಿದ್ದರು. ಯಾರು ವಿದ್ಯುತ್ ಬಿಲ್ ಕಟ್ಟಬೇಡಿ ಒಂದು ವೇಳೆ ವಿದ್ಯುತ್ ಬಿಲ್ ಕಟ್ಟಿದರೆ ಅದು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ರವರಿಗೆ ಅವಮಾನ ಮಾಡಿದಂತೆ ಎಂದು ವ್ಯಂಗ್ಯವಾಡಿದರು.
ವಿದ್ಯುತ್ ಬಿಲ್ ಕಟ್ಟದವರ ವಿದ್ಯುತ್ ಸಂಪರ್ಕ ಕಡಿತ ಮಾಡಿದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತದೆ ಎಂದು ಅವರು ಎಚ್ಚರಿಸಿದರು.
ಗ್ಯಾರೆಂಟಿ ಯೋಜನೆಗಳಿಗೆ ಯಾವುದೇ ಷರತ್ತು ಇಲ್ಲ ಎಂದು ಕಾಂಗ್ರೆಸ್ ನಾಯಕರು ಚುನಾವಣಾ ಸಂದರ್ಭದಲ್ಲಿ ಹೇಳಿದ್ದಾರೆ. ಈಗ ಷರತ್ತುಗಳನ್ನು ಹಾಕುವುದು ಸರಿಯಲ್ಲ, ಯಾವುದೇ ಷರತ್ತಿಲ್ಲದೆ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಬೇಕು. ಷರತ್ತು ಹಾಕಿದರೆ ಜನರಿಗೆ ಮೋಸ ಮಾಡಿದಂತೆ ಎಂದು ಹೇಳಿದರು.
ಬಿಲ್ ಕಟ್ಟಬೇಡಿ:
ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ತಕ್ಷಣ ಐದು ಗ್ಯಾರೆಂಟಿ ಯೋಜನೆ ಜಾರಿ ಮಾಡುವುದಾಗಿ ಹೇಳಿ ಇದುವರೆಗೂ ಜಾರಿ ಮಾಡಿಲ್ಲ. ಯಾರೂ ಕರೆಂಟ್ ಬಿಲ್ ಕಟ್ಟಬೇಡಿ, ಮಹಿಳೆಯರು ಟಿಕೆಟ್ ಪಡೆಯದೆ ಪ್ರಯಾಣಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಐದು ಗ್ಯಾರೆಂಟಿಗಳ ಭರವಸೆ ನೀಡಿ ಕುತಂತ್ರ ರಾಜಕಾರಣ ನಡೆಸಿ, ರಾಜ್ಯದ ಜನರನ್ನು ವಂಚಿಸಿದೆ ಎಂದು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರು ವಿದ್ಯುತ್ ನನಗೂ ಫ್ರೀ, ನಿನಗೂ ಫ್ರೀ ಎಂದು ಹೇಳಿದ್ದರು. ಆದರೆ ಈಗ ಷರತ್ತುಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಎಲ್ಲರಿಗೂ ಐದು ಗ್ಯಾರೆಂಟಿ ಫ್ರೀ ಎಂದಿದ್ದ ಸಿದ್ದರಾಮಯ್ಯ ಮೊದಲ ಸಂಪುಟದಲ್ಲೇ ಗ್ಯಾರೆಂಟಿ ಜಾರಿ ಮಾಡುತ್ತೇವೆ ಎಂದು ಹೇಳಿ ನೆಪ ಮಾತ್ರದ ಆದೇಶ ಹೊರಡಿಸಿದ್ದಾರೆ ಆದರೆ ಇದುವರೆಗೂ ಈ ಆದೇಶದ ಅನ್ವಯ ಯಾವುದೇ ಯೋಜನೆಗಳು ಜಾರಿ ಮಾಡಿಲ್ಲ ಎಂದು ಕಿಡಿಕಾರಿದರು
Previous Articleರಾಜ್ಯ ವಕ್ಫ್ ಮಂಡಳಿ ನೇಮಕದ ಅಚ್ಚರಿ
Next Article RSS ಅನ್ನು ನಿಷೇಧಿಸಿ. ನೋಡೋಣ!!