ಬೆಂಗಳೂರು,ಜೂ.24– ಡ್ರಗ್ ಪೆಡ್ಲಿಂಗ್‍ನಲ್ಲಿ ತೊಡಗಿದ್ದ ಖತರ್ನಾಕ್ ಡಿಜೆಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು 6.5 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಬಂಧಿತ ಡಿಜೆ ಡಾರ್ಕ್‍ವೆಬ್‍ಸೈಟ್ ಮೂಲಕ ಡ್ರಗ್ಸ್ ತರಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಬಂಧಿತನಿಂದ 6.5 ಲಕ್ಷ ಮೌಲ್ಯದ 15.08 ಗ್ರಾಂ ತೂಕದ 25 ಎಂಡಿಎಂಎ ಎಕ್ಸ್‍ಟಸಿ ಪಿಲ್ಸ್‍ಗಳು, 0.48 ಗ್ರಾಂ ತೂಕದ 29 ಎಲ್.ಎಸ್.ಡಿ ಸ್ಟ್ರಿಪ್ಸ್‍ಗಳು 1 ಕೆಜಿ ಗಾಂಜಾ, ಲ್ಯಾಪ್‍ಟಾಪ್ ಮೊಬೈಲ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಂಟಿ ಆಯುಕ್ತ ರಮಣ್ ಗುಪ್ತ ತಿಳಿಸಿದ್ದಾರೆ.
ಆರೋಪಿಯು ಕಡಿಮೆ ಬೆಲೆಗೆ ನಗರದಲ್ಲಿ ನೆಲೆಸಿರುವ ಆಫ್ರಿಕಾ ಪ್ರಜೆಯಿಂದ ಎಂಡಿಎಂಎ ಹಾಗು ಸ್ಥಳೀಯ ಪೆಡ್ಲರ್ ಗಳಿಂದ ಗಾಂಜಾವನ್ನು ಖರೀದಿಸಿ ಒಂದು ಎಂಡಿಎಂಎ ಎಕ್ಸ್ ಟೆಸಿ ಪಿಲ್ಸ್ ಅನ್ನು 3ರಿಂದ 4 ಸಾವಿರದಂತೆ, ಒಂದು
ಎಲ್‍ಎಸ್‍ಡಿ ಸ್ಟ್ರಿಪ್ಸ್ 8ರಿಂದ 10 ಸಾವಿರದಂತೆ ಹಾಗು 10 ಗ್ರಾಂ ಗಾಂಜಾವನ್ನು 1ರಿಂದ 2 ಸಾವಿರದಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿಯು ವಿರುದ್ಧ ವಿವೇಕ್‍ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.