ಬೆಂಗಳೂರು,ಸೆ.13- ಡ್ರಗ್ ಪೆಡ್ಲರ್ಸ್ ಗಳ ಜೊತೆ ನೇರ ನಂಟು ಹೊಂದಿದ್ದ ಇನ್ಸ್ ಪೆಕ್ಟರ್ ಸೇರಿ ಪಶ್ಚಿಮ ವಿಭಾಗದ ಎರಡು ಠಾಣೆಗಳ 11ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಮಾದಕವಸ್ತು ಸರಬರಾಜು ಮಾರಾಟ ದಂಧೆಯಲ್ಲಿ ತೊಡಗಿರುವುದು ಅಂತರಿಕ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ
ಚಾಮರಾಜಪೇಟೆ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಟಿ ಮಂಜಣ್ಣ ಅವರನ್ನು ಡಿಸಿಪಿ ಗಿರೀಶ್ ಅವರು ನೀಡಿದ ವರದಿಯನ್ನು ಆಧರಿಸಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಇದರ ಜೊತೆಗೆ ಚಾಮರಾಜಪೇಟೆ ಠಾಣೆಯ ಹೆಡ್ ಕಾನ್ ಸ್ಟೇಬಲ್ ಗಳಾದ ರಮೇಶ್ ಶಿವರಾಜ್ ಕಾನ್ಸ್ ಟೇಬಲ್ ಗಳಾದ ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ, ಆನಂದ್ ನನ್ನು ಅಮಾನತು ಮಾಡಿ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ಆದೇಶ ಹೊರಡಿಸಿದ್ದಾರೆ.
ಇನ್ನು ಜಗಜೀವನರಾಮನಗರದ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್(ಎ ಎಸ್ ಐ) ಕುಮಾರ್ ಹೆಡ್ ಕಾನ್ ಸ್ಟೇಬಲ್ ಆನಂದ್ ಸಿಬ್ಬಂದಿಗಳಾದ ಬಸವನಗೌಡ ಸೇರಿದಂತೆ ನಾಲ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಕಳೆದ ಆಗಸ್ಟ್ 22ರಂದು ಮಾದಕವಸ್ತು ಸರಬರಾಜು ಮಾರಾಟ ಮಾಡುತ್ತಿದ್ದ ಆರು ಮಂದಿ ಡ್ರಗ್ ಪೆಡ್ಲರ್ಸ್ ಗಳನ್ನುರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿತ್ತು.
ನಿರಂತರ ಸಂಪರ್ಕ:
ಬಂಧಿತ ಸಲ್ಮಾನ್, ನಯಾಜ್ ಉಲ್ಲಾ ,ನಯಾಜ್ ಖಾನ್ ಸೇರಿ ಆರು ಮಂದಿ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಬರುವ ಟೈಡಲ್-100 ಮಾತ್ರೆಗಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿತ್ತು.
ಆರೋಪಿಗಳ ಬಳಿ 1000 ಟೈಡಲ್-100 ಮಾತ್ರೆಗಳನ್ನು ವಶಪಡಿಸಿಕೊಂಡು ಆರೋಪಿಗಳ ಮೊಬೈಲ್ ಪರಿಶೀಲನೆಯ ವೇಳೆ ಅಧಿಕಾರಿಗಳಿಗೆ ಆರೋಪಿಗಳು ಪೊಲೀಸರ ಜೊತೆಗೆ ನಿರಂತರ ಸಂಪರ್ಕದಲ್ಲಿರುವುದು ಹಣಕಾಸಿಗೆ ಸಂಬಂಧಿಸಿದ ಮೆಸೇಜ್ ಮಾಡಿರುವುದು ಜೊತೆಗೆ ಆಡಿಯೋಗಳು ಪತ್ತೆಯಾಗಿದ್ದವು.
ಡ್ರಗ್ ಪೆಡ್ಲರ್ ಜೊತೆ ಪಾರ್ಟಿ:
ಅಲ್ಲದೇ ಆರೋಪಿಗಳ ಜೊತೆಗೆ ಪೊಲೀಸರು ಪಾರ್ಟಿ ಮಾಡಿದ ಫೋಟೋಗಳು ಪತ್ತೆಯಾಗಿದ್ದವು,ಈ ಸಂಬಂಧ ತನಿಖೆಗಾಗಿ ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ತಂಡವನ್ನು ಡಿಸಿಪಿ ಗಿರೀಶ್ ರಚಿಸಿದ್ದರು.
ಎಸಿಪಿ ಭರತ್ ರೆಡ್ಡಿ ಅವರು ನಡೆಸಿದ ತನಿಖೆಯಲ್ಲಿ ಡ್ರಗ್ ಪೆಡ್ಲರ್ಸ್ ಗಳ ಜೊತೆ ನಂಟು ಹೊಂದಿದ್ದ ಪೊಲೀಸರು ಮಾಮೂಲಿ ಪಡೆಯುತ್ತಿದ್ದ ಸಂಗತಿ ತನಿಖೆಯಲ್ಲಿ ಬಯಲಾಗಿತ್ತು.
ಕಡಿಮೆ ಬೆಲೆಗೆ ಟೈಡಲ್ ಮಾತ್ರೆ ಖರೀದಿಸಿ 300 400 ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಕಡಿಮೆ ಬೆಲೆಗೆ ಖರೀದಿಸಿ ಪೊಲೀಸರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುತ್ತಿದ್ದರು. ಪ್ರತಿ ತಿಂಗಳು ಇನ್ಸ್ ಪೆಕ್ಟರ್ ಸೇರಿದಂತೆ ಸಿಬ್ಬಂದಿಗಳಿಗೆ ಹಣ ನೀಡುತ್ತಿದ್ದರು.
ಸಂಬಂಧಿಕರಿಗೂ ಹಣ:
ಡ್ರಗ್ ಪೆಡ್ಲರ್ಸ್ ಗಳಿಂದ ಪೊಲೀಸರು ತಮ್ಮ ಸಂಬಂಧಿಕರ ಖಾತೆಗೂ ಕೂಡ ಹಣ ಹಾಕಿಸಿಕೊಂಡಿರುವ ವಿವರಗಳು ಪತ್ತೆಯಾಗಿ ಪೊಲೀಸರು ದಂಧೆಯಲ್ಲಿ ಭಾಗಿಯ ಸಂಬಂಧ ವಿಸ್ತೃತ ತನಿಖೆಯನ್ನು ಕೈಗೊಂಡ ಎಸಿಪಿ ಭರತ್ ರೆಡ್ಡಿ ಅವರು ಡಿಸಿಪಿ ಗಿರೀಶ್ ಗೆ ವಿವರವಾದ ವರದಿಯನ್ನು ಲಿಖಿತ ರೂಪದಲ್ಲಿ ನೀಡಿದರು.
ವರದಿಯನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೀಡಿ ಪರಿಶೀಲನೆ ನಡೆಸಿದ ಗಿರೀಶ್ 10 ಮಂದಿಯನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
Previous Articleಜಗ್ಗಿ ವಾಸುದೇವ್ ಹೆಸರಲ್ಲಿ ಮೋಸದ ಬಲೆ.
Next Article ದೇಶದಲ್ಲೇ ಮೊದಲು ಬೆಂಗಳೂರಿನ ಈ ವ್ಯವಸ್ಥೆ.

