ಬೆಂಗಳೂರು, ಫೆ.11-
ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯದ ಕೇಂದ್ರ ಆಯೋಗ ಮತ್ತು ಜಿಲ್ಲಾಧಿಕಾರಿಗಳು ಕೈಗೊಂಡಿರುವ ಸಿದ್ಧತೆಗಳಿಗೆ ಕೇಂದ್ರ ಚುನಾವಣಾ ಆಯೋಗ (Election Commission of India) ಮೆಚ್ಚುಗೆ ವ್ಯಕ್ತಪಡಿಸಿದ್ದು,ಅಕ್ರಮ ತಡೆಗಟ್ಟಲು ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ರೂಪಿಸುವಂತೆ ಸಲಹೆ ಮಾಡಿದೆ.
ವಿಧಾನಸಭೆ ಚುನಾವಣೆ ಕುರಿತಂತೆ ಜಿಲ್ಲಾಮಟ್ಟದಲ್ಲಿ ನಡೆಯುತ್ತಿರುವ ಪೂರ್ವತಯಾರಿಗಳ ಪರಿಶೀಲನೆಗಾಗಿ ಕೇಂದ್ರ ಚುನಾವಣಾ ಆಯೋಗದ ಮೂರು ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ನೇರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿತು. ಈ ತಂಡದ ಜೊತೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ (Manoj Kumar Meena) ಮತ್ತು ಅಪರ ಮುಖ್ಯ ಚುನಾವಣಾಧಿಕಾರಿ ರಾಜೇಂದ್ರ ಚೋಳನ್ (Rajendra Cholan) ಅವರು ಭಾಗವಹಿಸಿದ್ದರು.
ಆಯೋಗದ ಈ ಮೂರು ತಂಡಗಳ ಈ ಮೂರು ದಿನಗಳ ರಾಜ್ಯ ಬೇಟಿಯಲ್ಲಿ ಮುಖ್ಯವಾಗಿ ನಡೆಸಿದ ಸಭೆಗಳಲ್ಲಿ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಅತ್ಯಂತ ಕಡಿಮೆ ಮತದಾನ ನಡೆದಿರುವ ಮತಗಟ್ಟೆಗಳನ್ನು ಗುರುತಿಸುವುದು, ಕಡಿಮೆ ಮತದಾನಕ್ಕೆ ಕಾರಣಗಳನ್ನು ಕಂಡು ಹಿಡಿದು ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯುವುದು, ಮತದಾನದ ಜಾಗೃತಿ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕೆಂದು ಅಧಿಕಾರಿಗಳು ಸೂಚಿಸಿದರು.
ಮತಗಟ್ಟೆಗಳನ್ನು ಗುರುತಿಸುವುದು ಮತ್ತು ಅವುಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಅಗತ್ಯವಿರುವ ಸಿಬ್ಬಂದಿಗಳನ್ನು ನಿಯೋಜಿಸುವುದು, ಹೊಸ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಹೆಚ್ಚಿನ ಯುವ-ಮತದಾರರನ್ನು ಸೆಳೆಯುವುದು ಸೇರಿದಂತೆ ಮತದಾರರ ಪಟ್ಟಿಯ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಲು ಚರ್ಚಿಸಲಾಯಿತು.
ಈ ತಂಡಗಳು ಮತದಾರರ ಜಾಗೃತಿಯ ರಾಜ್ಯ ಸ್ವೀಪ್ (Systematic Voters’ Education and Electoral Participation – SVEEP) ಕಾರ್ಯಕ್ರಮಗಳ ಪೂರ್ವ ತಯಾರಿ ಕುರಿತಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ನೋಡಲ್ (SVEEP Nodal officer) ಅಧಿಕಾರಿಗಳೊಂದಿಗೆ ಸಭೆ ನಡೆಸಿದವು. ಮೊದಲ ದಿನ ಮತಗಟ್ಟೆಗಳು ಸೇರಿದಂತೆ ವಿವಿಧ ರೀತಿಯ ಮೊದಲ ಹಂತದ ಪೂರ್ವತಯಾರಿ ಕಾರ್ಯಗಳನ್ನು ಖುದ್ದಾಗಿ ವೀಕ್ಷಿಸಿದ ತಂಡಗಳು, ಎರಡನೆ ದಿನ ಆಯಾ ವಲಯ ಮಟ್ಟದ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದರು.
ನಂತರ ಬೆಂಗಳೂರು ನಗರಕ್ಕೆ ಆಗಮಿಸಿದ ಈ ಮೂರು ತಂಡಗಳ ಹಿರಿಯ ಅಧಿಕಾರಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿ ನೇತೃತ್ವದಲ್ಲಿ ಬೆಳಗಾವಿ ವಲಯದ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದರು, ಮಧ್ಯಾಹ್ನದ ನಂತರ ವಿಧಾನಸೌಧದಲ್ಲಿ ಬೆಂಗಳೂರು ವಲಯದ ಜಿಲ್ಲಾಧಿಕಾರಿಗೊಂದಿಗೆ ಸಭೆ ನಡೆಸಿ ನಂತರ ನವದೆಹಲಿಗೆ ಪ್ರಯಾಣ ಬೆಳಸಿದರು.