ದೇಶದಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸುತ್ತಿರುವ ತನಿಖೆಗಳ ಪಾರದರ್ಶಕತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಕಳೆದ ಒಂದು ದಶಕದಲ್ಲಿ ರಾಜಕೀಯ ನಾಯಕರ ವಿರುದ್ಧ ದಾಖಲಾದ ಪ್ರಕರಣಗಳು ಮತ್ತು ಅದರಲ್ಲಿನ ಶಿಕ್ಷೆಯ ಪ್ರಮಾಣವನ್ನು ಗಮನಿಸಿದರೆ, ಇಡಿ ಸಂಸ್ಥೆಯು ಕೇವಲ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುವ ಅಸ್ತ್ರವಾಗಿ ಬಳಕೆಯಾಗುತ್ತಿದೆಯೇ ಎಂಬ ಅನುಮಾನ ಕಾಡತೊಡಗಿದೆ.
2014 ರಿಂದ 2025ರ ನಡುವೆ ಇಡಿ ದಾಳಿಗಳ ಸಂಖ್ಯೆಯಲ್ಲಿ ಬರೋಬ್ಬರಿ 86 ಪಟ್ಟು ಏರಿಕೆಯಾಗಿದೆ. ಯುಪಿಎ ಆಡಳಿತದ ಅವಧಿಯಲ್ಲಿ ಸುಮಾರು 3,500 ಶೋಧ ಕಾರ್ಯಗಳು ನಡೆದಿದ್ದರೆ, ಮೋದಿ ಸರ್ಕಾರದ ಅವಧಿಯಲ್ಲಿ ಈ ಸಂಖ್ಯೆ 30,100 ದಾಟಿದೆ. ಆದರೆ, ಈ ತನಿಖೆಗಳ ಯಶಸ್ಸಿನ ದರ ಮಾತ್ರ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಕೇಂದ್ರ ಸರ್ಕಾರವೇ ಪಾರ್ಲಿಮೆಂಟ್‌ನಲ್ಲಿ ನೀಡಿದ ಮಾಹಿತಿಯ ಪ್ರಕಾರ, ಕಳೆದ 10 ವರ್ಷಗಳಲ್ಲಿ ರಾಜಕಾರಣಿಗಳ ವಿರುದ್ಧ ದಾಖಲಾದ 193 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು ಕೇವಲ ಇಬ್ಬರಿಗೆ!
2015 ರಿಂದ 2025ರ ಅವಧಿಯಲ್ಲಿ ಒಟ್ಟು 5,892 ಪ್ರಕರಣಗಳು ದಾಖಲಾಗಿದ್ದರೂ, ಶಿಕ್ಷೆಯ ಪ್ರಮಾಣ ಕೇವಲ 0.25% ನಷ್ಟಿದೆ. ಇದರಲ್ಲಿ ರಾಜಕೀಯ ನಾಯಕರ ವಿರುದ್ಧದ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರು ಕೇವಲ ಇಬ್ಬರು ಅಷ್ಟೇನೂ ಪ್ರಭಾವಿಗಳಲ್ಲದ ಜಾರ್ಖಂಡ್ ಶಾಸಕರು ಮಾತ್ರ.
ದೇಶದಲ್ಲೇ ಅತಿ ಹೆಚ್ಚು ಇಡಿ ಪ್ರಕರಣಗಳು ದಾಖಲಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಒಟ್ಟು 45 ಪ್ರಕರಣಗಳು ದಾಖಲಾಗಿದ್ದು, ಇವೆಲ್ಲವೂ ಕಾಂಗ್ರೆಸ್ ನಾಯಕರ ವಿರುದ್ಧವೇ ಇರುವುದು ವಿಶೇಷ. ಇದರಲ್ಲಿ 6 ಶಾಸಕರು ಮತ್ತು ಇಬ್ಬರು ಸಂಸದರು ಸೇರಿದ್ದಾರೆ. ಮುಡಾ ಪ್ರಕರಣದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬದ ವಿರುದ್ಧ ನಡೆಸಲಾಗುತ್ತಿರುವ ತನಿಖೆಯೂ ಸಹ ರಾಜಕೀಯ ದ್ವೇಷದ ಭಾಗ ಎಂಬ ಟೀಕೆಗಳು ಕೇಳಿಬಂದಿವೆ. ಅಲ್ಲದೆ, 2014 ರಿಂದ 2022 ರವರೆಗೆ ಇಡಿ ದಾಳಿಗೆ ಒಳಗಾದ 121 ಪ್ರಮುಖ ರಾಜಕಾರಣಿಗಳಲ್ಲಿ 115 ಮಂದಿ ವಿರೋಧ ಪಕ್ಷದವರಾಗಿದ್ದಾರೆ.
ಅಚ್ಚರಿಯೆಂದರೆ, ಇಡಿ ದಾಳಿಗೆ ಒಳಗಾದ 25 ಪ್ರಮುಖ ನಾಯಕರಲ್ಲಿ 23 ಮಂದಿ ನಂತರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದು ಬಿಜೆಪಿ ಸೇರ್ಪಡೆಯಾದವರಿಗೆ ಇಡಿ ತನಿಖೆಯಿಂದ ‘ರಕ್ಷಾ ಕವಚ’ ಸಿಗುತ್ತದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇಡಿ ಸಂಸ್ಥೆಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬದಲು, ಚುನಾವಣೆಗಳ ಸಮಯದಲ್ಲಿ ವಿರೋಧ ಪಕ್ಷದ ನಾಯಕರ ಪ್ರತಿಷ್ಠೆಗೆ ಧಕ್ಕೆ ತರಲು ಮತ್ತು ಅವರನ್ನು ಮಾನಸಿಕವಾಗಿ ಕುಗ್ಗಿಸಲು ಬಳಕೆಯಾಗುತ್ತಿದೆ ಎಂಬ ಆರೋಪಕ್ಕೆ ಈ ಅಂಕಿಅಂಶಗಳು ಪುಷ್ಟಿ ನೀಡುತ್ತಿವೆ. 193 ಪ್ರಕರಣಗಳಲ್ಲಿ ಕೇವಲ 2 ಶಿಕ್ಷೆ ಎನ್ನುವುದು ಇಡೀ ತನಿಖಾ ಸಂಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ.

