ಮೊಟ್ಟೆಯಲ್ಲಿರುವ ಪ್ರೋಟೀನ್ಸ್ (Protein) ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಈಗಾಗಲೇ ಸಾಬೀತಾಗಿರುವ ವಿಷಯ. ಅಲ್ಲದೆ, ಮೊಟ್ಟೆಯನ್ನು ತ್ವಚೆಯ ಮತ್ತು ಕೂದಲಿನ ಉತ್ತಮ ಆರೋಗ್ಯಕ್ಕಾಗಿ ಬಳಸುತ್ತೇವೆ. ಇತ್ತೀಚೆಗೆ ನಡೆದ ಸಂಶೋಧನೆಯೊಂದು ನಿಯಮಿತವಾದ ಮೊಟ್ಟೆ (Egg) ಯ ಸೇವನೆ ನಮ್ಮ ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ ಎಂದು ತಿಳಿಸಿಕೊಟ್ಟಿದೆ.
ಹೇಗೆ ಸಹಕಾರಿ?
ಮೊಟ್ಟೆಯಲ್ಲಿ ಪ್ರೋಟೀನ್ಸ್ ಮಾತ್ರವಲ್ಲದೆ ವಿಟಮಿನ್ಸ್, ಕ್ಯಾಲ್ಸಿಯಂ, ಅಯೋಡಿನ್, ಕಾರ್ಬೋಹೈಡ್ರೇಟ್ಸ್, ಫೈಬರ್ ಸೇರಿದಂತೆ ಹಲವು ಆವಶ್ಯಕ ಪೋಷಕಾಂಶಗಳಿವೆ. ಹಾಗಾಗಿ Balanced – diet ನಲ್ಲಿ ಮೊಟ್ಟೆ ಸಹ ಪ್ರಮುಖ ಸ್ಥಾನವನ್ನು ಗಳಿಸುತ್ತದೆ.
ರಕ್ತದೊತ್ತಡದ ಸಮಸ್ಯೆಗೂ ಒಳ್ಳೆಯದು
ಇದರಲ್ಲಿರುವ ಪ್ರೋಟೀನ್‌ಗಳು ನೈಸರ್ಗಿಕವಾಗಿ ರಕ್ತದೊತ್ತಡವನ್ನು (Blood Pressure) ಕಡಿಮೆ ಮಾಡುವ ಗುಣಗಳನ್ನು ಹೊಂದಿವೆ. ಅವು ನೈಸರ್ಗಿಕವಾಗಿ ಶಕ್ತಿಯುತ ACE (angiotensin-converting enzyme) ಪ್ರತಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಇದರಲ್ಲಿರುವ ನೈಸರ್ಗಿಕ ಪ್ರೋಟೀನ್ಗಳು ರಕ್ತನಾಳಗಳನ್ನು ಸಡಿಲಿಸಿ, ರಕ್ತದ ಹರಿವನ್ನು ಸುಧಾರಿಸುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ.
ಮಧುಮೇಹಿಗಳೂ ಮೊಟ್ಟೆ ಸೇವಿಸಿದರೆ ಒಳ್ಳೆಯದು
ಮೊಟ್ಟೆಯಲ್ಲಿರುವಂತಹ ಪ್ರೋಟೀನ್ಗಳು ಗ್ಲೂಕೋಸ್ (Glucose) ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸುತ್ತವೆ. ಹಾಗಾಗಿ ಮಧುಮೇಹಿ(Diabetic Patients) ಗಳು ನಿಯಮಿತವಾಗಿ ಮಿತವಾದ ಪ್ರಮಾಣದಲ್ಲಿ ಮೊಟ್ಟೆಯನ್ನು ಸೇವಿಸಿದರೆ ಒಳ್ಳೆಯದು.
ಹೃದಯಕ್ಕೂ ಒಳ್ಳೆಯದು
ಮೊಟ್ಟೆಗಳು ಉತ್ತಮ ಕೊಲೆಸ್ಟ್ರಾಲ್ (Good Cholesterol) ಮಟ್ಟವನ್ನು ಸುಧಾರಿಸಿ, ಹೃದಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತವೆ.
ಮೊಟ್ಟೆ ತಿಂದರೆ ತೂಕ ಇಳಿಯುತ್ತದೆ!
ಹೌದು. ಮೊಟ್ಟೆ ನಿಧಾನವಾಗಿ ಜೀರ್ಣವಾಗುವುದರಿಂದ, ತುಂಬಾ ಸಮಯದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗಾಗಿ, ಅದು ತೂಕ ನಿರ್ವಹಣೆಗೂ ಸಹಕಾರಿ.
ಹಾಗಿದ್ದರೆ, ಒಬ್ಬ ಮನುಷ್ಯ ಎಷ್ಟು ಮೊಟ್ಟೆಗಳನ್ನು ತಿಂದರೆ ಒಳ್ಳೆಯದು?
ಸಂಶೋಧನೆಯ ಪ್ರಕಾರ, ಒಬ್ಬ ಆರೋಗ್ಯವಂತ ವಯಸ್ಕನ ಪ್ರತಿ ಕಿಲೋಗ್ರಾಂ ತೂಕಕ್ಕೆ ದಿನಕ್ಕೆ 0.8 ರಿಂದ 1 ಗ್ರಾಂ ಪ್ರೋಟೀನ್ ಅಗತ್ಯವಿದೆ. ಒಂದು ಮೊಟ್ಟೆ, ಸರಿಸುಮಾರು 6 ಗ್ರಾಂ ಪ್ರೋಟೀನ್ ನೀಡುತ್ತದೆ. ಅಂದರೆ, ಒಬ್ಬ ವ್ಯಕ್ತಿ ಒಂದು ವಾರದಲ್ಲಿ 4 ರಿಂದ 5 ಮೊಟ್ಟೆಗಳನ್ನು ತಿಂದರೆ ಆರೋಗ್ಯಕರ.
ಮೊಟ್ಟೆಯ ಯಾವ ಭಾಗ ಒಳ್ಳೆಯದು?
ಮೊಟ್ಟೆಯ ಹಳದಿ ಭಾಗ (Yolk) ಹೆಚ್ಚು ಕೊಬ್ಬಿನಾಂಶವನ್ನು ಹೊಂದಿರುತ್ತದೆ. ಹಾಗಾಗಿ, ಮೊಟ್ಟೆಯ ಬಿಳಿಯ ಭಾಗವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ, ಅದನ್ನು ಎಣ್ಣೆಯಲ್ಲಿ ಫ್ರೈ ಮಾಡುವುದಕ್ಕಿಂತ ಬೇಯಿಸಿದರೆ, ಅದರ ಪೋಷಕಾಂಶಗಳೊಂದಿಗೆ ಮೊಟ್ಟೆಯನ್ನು ಸೇವಿಸಬಹುದು.