ಮೈಸೂರು – ಭಾರತ್ ಜೋಡೋ ಪಾದಯಾತ್ರೆಯಲ್ಲಿ ನಿರತರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಎರಡು ದಿನದ ಬಿಡುವಿನ ವೇಳೆ ತಮ್ಮ ತಾಯಿ ಸೋನಿಯಾ ಅವರೊಂದಿಗೆ ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿದ್ದರು ಅಲ್ಲಿ ಆನೆಯೊಂದರ ಸ್ಥಿತಿ ಕಂಡು ಮಮ್ಮಲ ಮರುಗಿದ್ದಾರೆ.
ಎರಡು ದಿನದ ಬಿಡುವಿನ ಹಿನ್ನೆಲೆ ಕಬಿನಿ ಆರೆಂಜ್ ಕೌಂಟಿ ರೆಸಾರ್ಟ್‌ನಲ್ಲಿ ತಾಯಿ ಸೋನಿಯಾ ಗಾಂಧಿ ಅವರ ಜೊತೆ ರಾಹುಲ್ ಗಾಂಧಿ ವಾಸ್ತವ್ಯ ಹೂಡಿದ್ದಾರೆ. ಈ ವೇಳೆ ಅವರು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸುತ್ತಾಟ ನಡೆಸಿದರು. ನಿರಂತರ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ರಾಹುಲ್, ಅರಣ್ಯದಲ್ಲಿ ದಟ್ಟ ಹಸಿರಿನ ನಡುವೆ ವನ್ಯ ಜೀವಿಗಳ ವಿಹಾರವನ್ನು ಕಂಡು ಪುಳಕಗೊಂಡರು. ಈ ವೇಳೆ ಅವರಿಗೆ ಗಾಯಗೊಂಡ ಆನೆ ಮರಿ ಕಣ್ಣಿಗೆ ಬಿದ್ದಿತ್ತು
ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ರಾಹುಲ್ ಗಾಂಧಿ ಗಾಯಗೊಂಡಿರುವ ಆನೆ ಮರಿ ತನ್ನ ತಾಯಿಯ ಜೊತೆಗೆ ಇದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಅದರ ಜೀವ ಉಳಿಸಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.
ಆನೆ ಮರಿಯ ಬಾಲ ಹಾಗೂ ದಂತದ ಬಳಿ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿರುವ ರಾಹುಲ್ ಗಾಂಧಿ, ಆನೆ ಮರಿಯ ಜೀವ ಉಳಿಸಿ, ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.