ಬೆಂಗಳೂರು,ಮಾ.6-
ಹೈಕೋರ್ಟ್ ಆದೇಶದ ಮಾದರಿಯಲ್ಲಿ ನಕಲಿ ಆದೇಶಗಳನ್ನು ಸೃಷ್ಟಿ ಮಾಡಿ ಲಕ್ಷಾಂತರ ರೂ ಹಣ ವಂಚನೆ ಮಾಡಿದ ಇಬ್ಬರು ಆರೋಪಿಗಳನ್ನು ವಿಧಾನಸೌಧ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಣಿಗಲ್ ಮೂಲದ ವಿಜೇತ್, ಲೋಹಿತ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಹೈಕೋರ್ಟ್ ನೀಡುವ ಆದೇಶದ ಪ್ರತಿಯ ರೀತಿ ನಕಲಿ ಆದೇಶ ಪ್ರತಿ ತಯಾರಿಸುತ್ತಿದ್ದರು. ಅದನ್ನು ಬಳಸಿಕೊಂಡು ಅನೇಕರನ್ನು ವಂಚಿಸಿದ್ದರು.
ಒಬ್ಬ ಆರೋಪಿಯಂತೂ, ಇಂತಹ ಆದೇಶದ ಮೂಲಕ ತನ್ನ ಪ್ರೇಯಸಿಯ ಸ್ನೇಹಿತನನ್ನೇ ವಂಚಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಆರೋಪಿ ವಿಜೇತ್, ಜಾರಿ ನಿರ್ದೇಶನಾಲಯ (ಇಡಿ) ಹಣ ಮುಟ್ಟುಗೋಲು ಹಾಕಿಕೊಂಡ ಪ್ರಕರಣವೊಂದಕ್ಕೆ ಸಂಬಂಧಿಸಿದ್ದು ಎಂಬ ನಂಬಿಕೆ ಬರುವ ರೀತಿಯಲ್ಲಿ ಹೈಕೋರ್ಟ್ ಆದೇಶವನ್ನೇ ಹೋಲುವಂತೆ ನಕಲಿ ಆದೇಶ ಪ್ರತಿ ತಯಾರಿಸಿದ್ದ.
ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯ ಒಂದು ಕೋಟಿ ರೂಗೂ ಹೆಚ್ಚು ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆದರೆ, ಹೈಕೋರ್ಟ್ ಈ ತಮ್ಮ ಪರ ತೀರ್ಪು ನೀಡಿದ್ದು, ಸೀಜ್ ಮಾಡಿದ ಹಣವನ್ನು ಜಾರಿ ನಿರ್ದೇಶನಾಲಯ ನಮಗೆ ನೀಡಬೇಕಿದೆ. ಆ ಹಣವನ್ನು ಬಿಡಿಸಿಕೊಳ್ಳಲು ಸ್ವಲ್ಪ ಹಣ ಬೇಕಾಗಿದೆ. ಮೊತ್ತ ಕೈಸೇರಿದ ಕೂಡಲೇ ಹಿಂದಿರುಗಿಸುವುದಾಗಿ ಆರೋಪಿಗಳು ಜನರನ್ನು ವಂಚಿಸುತ್ತಿದ್ದರು. ಹೈಕೋರ್ಟ್ ಆದೇಶವನ್ನೇ ಹೋಲುವ ನಕಲಿ ಪ್ರತಿ ತಯಾರಿಸಿ ಜನರಲ್ಲಿ ನಂಬಿಕೆ ಬರುವಂತೆ ಮಾಡಿ ಹಣ ಪೀಕುತ್ತಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.
ಆರೋಪಿಗಳು ನಮಗೆ ಇಡಿ ಅಧಿಕಾರಿಗಳಿಂದ ಕೋಟ್ಯಂತರ ರೂ ಬಿಡುಗಡೆ ಆಗಬೇಕಿದೆ. ಅದಕ್ಕೆ ಹೈಕೋರ್ಟ್ ಆದೇಶ ಕೂಡ ಮಾಡಿದೆ. ಆದರೆ, ಈಗ ನನಗೆ ಇದನ್ನು ಬಿಡಿಸಿಕೊಳ್ಳಲು ಹಣ ಕಟ್ಟಬೇಕಿದೆ. ಇಡಿ ಕೊಟ್ಟ ಬಳಿಕ ಹಣ ವಾಪಸ್ ಕೊಡುವುದಾಗಿ ಆರೋಪಿಗಳು ಹೇಳಿದ್ದರು. ಇದನ್ನು ನಂಬಿ ಹಣ ಕೊಟ್ಟ ಮೂವರಿಗೆ ವಂಚನೆ ಎಸಗಿದ್ದರು. ಸುಮಾರು 70 ಲಕ್ಷ ರೂಗೂ ಹೆಚ್ಚಿನ ಹಣ ಪಡೆದು ವಂಚಿಸಿದ್ದರು. ವಿಧಾನಸೌಧ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
Previous Articleವರ್ತಿಕಾ ಕಟಿಯಾರ್ ಬಗ್ಗೆ ರೂಪಾ ಮೌದ್ಗೀಲ್ ಏನು ಹೇಳಿದ್ದಾರೆ ನೋಡಿ
Next Article ಕನ್ನಡ ನ್ಯೂಸ್ ಚಾನಲ್ ನೋಡೋರು ಇಲ್ಲವಾಗುತ್ತಿದ್ದಾರೆ