ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ.
ಪ್ರಕರಣ ಕುರಿತಂತೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಹಿರಿಯ ಮಂತ್ರಿಗಳು ಹಾಗು ಪಕ್ಷದ ಪ್ರಮುಖ ನಾಯಕರ ಅಭಿಪ್ರಾಯ ಪಡೆದಿರುವ ಸಿ.ಎಂ ಬೊಮ್ಮಾಯಿ ಈ ನಿರ್ಧಾರಕ್ಕೆ ಬಂದಿದ್ದು, ಪ್ರಾಥಮಿಕ ಹಂತದ ಪ್ರಕ್ರಿಯೆಗಳು ಮುಗಿದ ಕೂಡಲೆ ಪ್ರಕರಣ ಸಿಐಡಿ ಗೆ ಹಸ್ತಾಂತರವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿ ಪಕ್ಷಗಳು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗು ಸಚಿವ ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಬಾಯಿ ಮುಚ್ಚಿಸಲು ಪ್ರಕರಣವನ್ನು ಸಿಐಡಿಗೆ ನೀಡಲಿದೆ ಎಂದು ಗೊತ್ತಾಗಿದೆ.
ಪ್ರಕರಣದ ಬಗ್ಗೆ ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ನೀಡಬೇಕು.ಇದರಲ್ಲಿ ಸಚಿವ ಈಶ್ವರಪ್ಪ ತಪ್ಪಿತಸ್ಥರು ಎಂದು ಸಾಬೀತಾದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.