ಬೆಂಗಳೂರು:
ತಮಿಳುನಾಡು ಮತ್ತು ಕರ್ನಾಟಕ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಸವಾಲಾಗಿದ್ದ ಕಾಡುಗಳ್ಳ, ದಂತಚೋರ ವೀರಪ್ಪನ್ ಅಡಗುದಾಣವಾಗಿದ್ದ ಕಾಡು ಇದೀಗ ಪ್ರವಾಸೋದ್ಯಮ ಕೇಂದ್ರವಾಗಲಿದೆ
ವರನಟ ಡಾ. ರಾಜ್ಕುಮಾರ್ ಅವರನ್ನು ಅಪಹರಣ ಮಾಡಿದ ವೀರಪ್ಪನ್ ಅವರನ್ನು ನಾಗರಹೊಳೆ ಅಭಯಾರಣ್ಯದ ಕರ್ನಾಟಕಕ್ಕೆ ಸೇರಿದ ಪ್ರದೇಶದಲ್ಲೇ ಸುತ್ತಾಡಿಸಿದ್ದ.ಇದೀಗ ಆ ಕಾಡಿನಲ್ಲಿ ಸಫಾರಿ ಆರಂಭಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಶೀಘ್ರದಲ್ಲೇ ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಹೊಗೇನಕಲ್ ಜಲಪಾತದಿಂದ ಸಫಾರಿ ಆರಂಭಿಸಲು ಕರ್ನಾಟಕ ಅರಣ್ಯ ಇಲಾಖೆ ಉತ್ಸುಕವಾಗಿದೆ.
ತಮಿಳುನಾಡು ವೀರಪ್ಪನ್‌ನ ಹುಟ್ಟೂರಾದ ಗೋಪಿನಾಥನ್‌ನಿಂದ ಆರಂಭಿಸಿರುವ ಸಫಾರಿಗೆ ಪ್ರವಾಸಿಗರಿಂದ ಹೆಚ್ಚಿನ ಬೇಡಿಕೆ ಇರುವುದನ್ನು ಗಮನಿಸಿ ಕರ್ನಾಟಕ ಅರಣ್ಯ ಇಲಾಖೆ ಸಹ ಹೊಗೇನಕಲ್ನಲ್ಲಿ ಸಫಾರಿ ಆರಂಭಿಸಲು ಪ್ರಕ್ರಿಯೆ ಆರಂಭಿಸಿದೆ.
ಉದ್ದೇಶಿತ ಸಫಾರಿಯು 22 ಕಿಲೋಮೀಟರ್ ಅರಣ್ಯ ವ್ಯಾಪ್ತಿಯನ್ನು ಒಳಗೊಂಡಿರಲಿದೆ. ವಿಶೇಷವಾಗಿ, ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿನ ವೀರಪ್ಪನ್ ಅಡಗುತಾಣಗಳನ್ನು ಒಳಗೊಂಡಿರಲಿವೆ, ಈ ಪ್ರದೇಶವು ಆನೆಗಳು, ಜಿಂಕೆಗಳು, ಕರಡಿಗಳು ಮತ್ತು ಇತರ ವನ್ಯಜೀವಿಗಳ ಹೆಚ್ಚಿನ ಇರುವಿಕೆಯನ್ನು ಹೊಂದಿವೆ ಎಂದು ವರದಿ ಉಲ್ಲೇಖಿಸಿದೆ.
ಕಾವೇರಿ ವನ್ಯಜೀವಿ ಅಭಯಾರಣ್ಯದ ಅಧಿಕಾರಿಗಳು ಹೊಗೇನಕಲ್ನಿಂದಲೇ ಸಫಾರಿಯನ್ನು ಪ್ರಾರಂಭಿಸಲು ಬಯಸಿದ್ದಾರೆ. ಯಾಕೆಂದರೆ ಇದು ಗಡಿಯ ಎರಡೂ ಬದಿಗಳಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ವಿಶೇಷವಾಗಿ ಕಾವೇರಿ ನದಿಯಲ್ಲಿ ದೋಣಿ ವಿಹಾರ ಮತ್ತು ಮೀನಿನ ಸಾಂಪ್ರದಾಯಿಕ ಭಕ್ಷ್ಯಗಳಿಂದ ಪ್ರಸಿದ್ಧವಾಗಿದೆ. ಹೀಗಾಗಿ ಈ ಭಾಗದಲ್ಲಿ ಆರಂಭಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿದೆ.
ಅರಣ್ಯ ಇಲಾಖೆಯು ಬೆಳಿಗ್ಗೆ ಎರಡು ಮತ್ತು ಸಂಜೆ ಎರಡರಂತೆ ನಾಲ್ಕು ಟ್ರಿಪ್‌ಗಳ ಸಫಾರಿಗೆ ಚಿಂತನೆ ನಡೆಸಿದೆ. 25 ಮಂದಿಯನ್ನು ಸಾಗಿಸುವ ಸಾಮರ್ಥ್ಯವುಳ್ಳ 2 ವಾಹನಗಳನ್ನು ಬಳಸಿಕೊಳ್ಳಲು ಉದ್ದೇಶಿಸಿದೆ. ದಟ್ಟಾರಣ್ಯದಲ್ಲಿ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆದೊಯ್ಯಬಲ್ಲ ಹೊಸ ಸಫಾರಿ ವಾಹನಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಆರ್ಡರ್ ಮಾಡಿದ್ದಾರೆ ಎಂದೂ ವರದಿ ಉಲ್ಲೇಖಿಸಿದೆ.
ಹೊಗೇನಕಲ್ ಜಲಪಾತಕ್ಕೆ 2024 ರ ಜನವರಿಯಲ್ಲಿ 3500 ಪ್ರವಾಸಿಗರು ಭೇಟಿ ನೀಡಿದ್ದರೆ, ಮಾರ್ಚ್‌ನಲ್ಲಿ 9,381 ಪ್ರವಾಸಿಗರು ಭೇಟಿ ನೀಡಿದ್ದರು. ಸುಮಾರು 1,400 ವಿದೇಶಿ ಪ್ರವಾಸಿಗರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ಜಾಗದಲ್ಲಿ ಸಫಾರಿಯನ್ನೂ ಆರಂಭಿಸುವುದರಿಂದ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ. ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಧಿಕಾರಿಗಳ ಲೆಕ್ಕಾಚಾರವಾಗಿದೆ.
Previous Articleಕರ್ನಾಟಕಕ್ಕೆ ಸಿದ್ದರಾಮಯ್ಯ ಹೆಸರಿಡಬೇಕಂತ
Next Article ರಾಜ್ಯ ಕಾಂಗ್ರೆಸ್ಸಿನಲ್ಲಿ ಏನಾಗುತ್ತಿದೆ ಗೊತ್ತಾ

