ನವದೆಹಲಿ.
ಮತದಾರರ ಪಟ್ಟಿಯಲ್ಲಿ ವ್ಯಾಪಕ ಪ್ರಮಾಣದ ಆಕ್ರಮ ನಡೆಸುವ ಮೂಲಕ ಚುನಾವಣಾ ಆಯೋಗ ದೊಡ್ಡ ಮಟ್ಟದಲ್ಲಿ ಮತಗಳ್ಳತನಕ್ಕೆ ಸಹಾಯ ಮಾಡಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಇದೀಗ ಚುನಾವಣಾ ಆಯೋಗದ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ.
ಮತಗಳ್ಳತನದ ಬಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸಮರ ಸಾರಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ದೂರು ನೀಡಿದ್ದಾರೆ ಪ್ರತಿಯಾಗಿ ಆಯೋಗ ದೂರಿನ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆ ನೀಡಿದೆ.
ಪ್ರತಿ ಪಕ್ಷ ನಾಯಕನಿಗೆ ಇಂತಹ ಎಚ್ಚರಿಕೆ ನೀಡಿರುವ ಆಯೋಗದ ವಿರುದ್ಧ ಇದೀಗ ಇಂಡಿಯಾ ಮೈತ್ರಿಕೂಟ ರಣಕಹಳೆ ಮೊಳಗಿಸಲು ಸಜ್ಜುಗೊಂಡಿದೆ.
ಕೇಂದ್ರ ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದರೂ ಕೂಡ ಅದರ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಇಂಡಿಯಾ ಮೈತ್ರಿಕೂಟ ಇದೀಗ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಂಡನೆ ಪ್ರಸ್ತಾಪ ಮಂಡಿಸಲು ಮುಂದಾಗಿದೆ.
ಲೋಕಸಭೆಯಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡಿಸಲು ಅವಕಾಶ ಕೋರಿ ಇಂಡಿಯಾ ಮೈತ್ರಿಕೂಟ ಸದಸ್ಯರು ತೀರ್ಮಾನ ಮಾಡಿದ್ದಾರೆ ಈ ಮೂಲಕ ಲೋಕಸಭೆಯಲ್ಲಿ ಅವರ ವಿರುದ್ಧ ನಿರ್ಣಯ ಅಂಗೀಕರಿಸಿ ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ಅವರನ್ನು ಎತ್ತಂಗಡಿ ಮಾಡುವಂತೆ ಮಾಡುವುದು ಪ್ರತಿಪಕ್ಷಗಳ ಕಾರ್ಯತಂತ್ರವಾಗಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಕೆಲವರ ವಿರುದ್ಧ ಕೇಳಿ ಬಂದ ಆರೋಪಗಳ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಅವರ ವಿರುದ್ಧ ವಾಗ್ದಂಡನೆ ಮಂಡನೆಯಾಗಿರುವ ಇತಿಹಾಸವಿದೆ ಆದರೆ ಕೇಂದ್ರ ಚುನಾವಣಾ ಆಯುಕ್ತರ ವಿರುದ್ಧ ವಾಗ್ದಂಡನೆ ಪ್ರಸ್ತಾಪ ಮಂಡನೆ ಆಗುತ್ತಿರುವುದು ಇತಿಹಾಸದಲ್ಲಿ ಇದೆ ಮೊದಲು ಎನ್ನಲಾಗಿದೆ.
Previous Articleಅಭಿಮಾನಿಗಳಿಗೆ ಪತ್ರ ಬರೆದ ದಾಸ
Next Article ಶಿವಗಂಗಾ ಬಸವರಾಜ್ ಗೆ ಶೋಕಾಸ್ ನೋಟಿಸ್

