ಅವನು ಕೇವಲ ಆರು ವರ್ಷದ ಪುಟ್ಟ ಪೋರ. ಆದರೆ ಆಟಿಕೆಗಳನ್ನು ಹಿಡಿಯಬೇಕಾದ ಆ ಪುಟ್ಟ ಕೈಗಳು, ಬಂದೂಕನ್ನು ಹಿಡಿದದ್ದು ಮಾತ್ರ ಆಘಾತಕಾರಿ ವಿಷಯ. ಅದಕ್ಕಿಂತ ಆಘಾತವೆಂದರೆ, ವಿದ್ಯೆ ಕಲಿಸುವ ತನ್ನ ಶಿಕ್ಷಕಿಗೇ ಈ ಪೋರ ಶೂಟ್ ಮಾಡಿದ್ದಾನೆ. ಹೌದು, ಓದಿ ಅಚ್ಚರಿಯಾದರೂ, ಕೋಪ ಬಂದರೂ, ವಿಷಾದವೆನಿಸಿದರೂ, ನಂಬಲು ಕಷ್ಟವಾದರೂ ಇದು ನಂಬಲೇ ಬೇಕಾದ ಸತ್ಯ ಘಟನೆ. ಈ ಘೋರವಾದ ಘಟನೆ ನಡೆದಿದ್ದು ವರ್ಜಿನಿಯಾದ ನ್ಯೂಪೋರ್ಟ್ ನ್ಯೂಸ್ ಎಂಬ ನಗರದ ರಿಚ್ನೆಕ್ ಎಲೆಮೆಂಟರಿ ಶಾಲೆಯಲ್ಲಿ.
ಶಿಕ್ಷಕಿ ಮತ್ತು ಬಾಲಕನ ನಡುವೆ ವಾಗ್ವಾದ ಶುರುವಾಗಿತ್ತು. ಆಗಲೇ, ತನ್ನ ಬಳಿಯಿದ್ದ ಬಂದೂಕಿನಿಂದ ಬಾಲಕ ಶಿಕ್ಷಕಿಯ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಇದು ಅಕಸ್ಮಾತ್ ಆಗಿ ಆದದ್ದಲ್ಲ ಎಂಬುದು ಮತ್ತಷ್ಟು ಆಘಾತ ನೀಡುವ ಸಂಗತಿ. ಘಟನೆಯನ್ನು ಪರಿಶೀಲಿಸಿದ ಪೋಲಿಸ್ ಚೀಫ಼್ ಸ್ಟೀವ್ ಡ್ರೀವ್, ಸುದ್ದಿ ಗೋಷ್ಟಿಯಲ್ಲಿ ಹೀಗೆ ಹೇಳಿದ್ದಾರೆ. ಆರೋಪಿ ಬಾಲಕನನ್ನು ವಶಕ್ಕೆ ಪಡೆದಿದ್ದೇವೆ. ಇತ್ತೀಚೆಗೆ ಬಂದ ಆಸ್ಪತ್ರೆಯ ವರದಿಯ ಪ್ರಕಾರ ಗಾಯಾಳು ಶಿಕ್ಷಕಿಯ ಆರೋಗ್ಯ ಪರಿಸ್ಥಿತಿ ಕೂಡ ಸುಧಾರಿಸುತ್ತಿದೆ. ಬಾಲಕನ ಕೈಯ್ಯಲ್ಲಿ ಬಂದೂಕು ಹೇಗೆ ಬಂತು? ಅದನ್ನು ಉಪಯೋಗಿಸುವಂಥ ಸಂದರ್ಭ ಏನಿತ್ತು? ಪರಿಸ್ಥಿತಿ ಕೈ ಮೀರಲು ಕಾರಣವೇನು ಎಂಬುದನ್ನೆಲ್ಲ ತನಿಖೆ ನಡೆಸಿ ತಿಳಿದುಕೊಳ್ಳುತ್ತೇವೆ.
ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ನ್ಯೂಪೋರ್ಟ್ ನ್ಯೂಸ್ ಪಬ್ಲಿಕ್ ಶಾಲೆಯ ಸೂಪರಿನ್ಡ್ಟೆಂಡೆಂಟ್ ಡಾ. ಜೊರ್ಜ್ ಪಾರ್ಕರ್ ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾತನಾಡುತ್ತ, “ಈ ಘಟನೆಯ ಬಗ್ಗೆ ನನಗೆ ತೀವ್ರ ದುಃಖವಿದೆ. ಬಂದೂಕಿನಂತಹ ಮಾರಕ ವಸ್ತುಗಳನ್ನು ಮಕ್ಕಳ ಕೈಗೆ ಸಿಗದಂತೆ ನಾವು ಎಚ್ಚರವಹಿಸಬೇಕಿದೆ. ಈ ನಿಟ್ಟಿನಲ್ಲಿ ನಮಗೆ ಸಮುದಾಯದ ಸಂಪೂರ್ಣ ಬೆಂಬಲ ಬೇಕೆಂದು
ಕೋರಿಕೊಳ್ಳುತ್ತೇನೆ. ಮಕ್ಕಳನ್ನು ಸುರಕ್ಷಿತವಾಗಿ ಇಡುವಲ್ಲಿ ನಾವು ಮತ್ತಷ್ಟು ಹೆಚ್ಚು ಪರಿಶ್ರಮ ವಹಿಸಬೇಕಿದೆ” ಎಂದಿದ್ದಾರೆ.
ಆಟಿಕೆಯೊಂದಿಗೆ ಆಡಬೇಕಾದ ವಯಸ್ಸಲ್ಲಿ ಮಾರಕ ವಸ್ತುಗಳ ಪ್ರಯೋಗ ನಿಜಕ್ಕೂ ಆಘಾತಕಾರಿ. ಇಂತಹ ಬೆಳವಣಿಗೆಗಳನ್ನು ಕಂಡಾಗ ಎತ್ತ ನಡೆಯುತ್ತಿದೆ ಈ ಸಮಾಜ ಎಂದು ಎದೆ ನಡುಗುವುದು ಸುಳ್ಳಲ್ಲ.