ಕಾಂಗ್ರೆಸ್ ನಾಯಕತ್ವದ ಬಗ್ಗೆ ಮುನಿಸಿಕೊಂಡು ಇತ್ತೀಚಿನ ಪಕ್ಷದ ಚಟುವಟಿಕೆಗಳಿಂದ ದೂರವಿರುವ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಪಕ್ಷ ತೊರೆಯುವ ಬೆದರಿಕೆ ಹಾಕಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದು, ಇದೇ ಸ್ಥಿತಿ ಮುಂದುವರೆದಲ್ಲಿ ತಮ್ಮ ಬೆಂಬಲಿಗರೊಂದಿಗೆ ತಮ್ಮ ದಾರಿ ತಾವು ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದರೆನ್ನಲಾಗಿದೆ.
ರಾಜ್ಯದಲ್ಲಿ ಇತ್ತೀಚೆಗೆ ಮುಸ್ಲಿಂ ಸಮುದಾಯದ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಸಮುದಾಯದಲ್ಲಿ ಅಭದ್ರತೆಯ ವಾತಾವರಣ ಮೂಡುತ್ತಿದೆ. ಎಲ್ಲೆಡೆ ಆಗುತ್ತಿರುವ ಅನ್ಯಾಯದ ಬಗ್ಗೆ ಕಾಂಗ್ರೆಸ್ ನಲ್ಲಿ ಯಾರೂ ಧ್ವನಿ ಎತ್ತುತ್ತಿಲ್ಲ ಎಂದು ಅಸಮಧಾನ ತೋಡಿಕೊಂಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಂತೂ ಈ ಬಗ್ಗೆ ಚಕಾರವೆತ್ತಿತ್ತಿಲ್ಲ ಪಕ್ಷದ ವತಿಯಿಂದ ಸಮುದಾಯದ ಮುಖಂಡರ ಸಭೆ ಕರೆದು ನಾವು ನಿಮ್ಮೊಂದಿಗಿದ್ದೇವೆ ಎಂಬ ಸಂದೇಶರವಾನಿಸುವಂತೆ ಮನವಿ ಮಾಡಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಕೇವಲ ಮುಸ್ಲಿಂ ಮಾತ್ರವಲ್ಲ ದಲಿತ,ಹಿಂದುಳಿದವರಲ್ಲೂ ಇದೇ ಅಭದ್ರತೆಯ ವಾತಾವರಣ ಕಂಡು ಬರುತ್ತಿದೆ.ಆದರೆ, ಪಕ್ಷದ ವತಿಯಿಂದ ಈ ವರ್ಗಗಳಿಗೆ ಭರವಸೆ ಮೂಡಿಸುವ ಕೆಲಸವಾಗುತ್ತಿಲ್ಲ ಎಂದು ದೂರುಗಳ ಸರಮಾಲೆಯನ್ನೇ ನೀಡಿದ ಅವರು ಭರವಸೆಯಿಲ್ಲದ ಪಕ್ಷದಲ್ಲಿ ಯಾಕಿರಬೇಕೆಂದು ಪ್ರಶ್ನಿಸಿರುವುದಾಗಿ ಮೂಲಗಳು ತಿಳಿಸಿವೆ.
ಎಲ್ಲವನ್ನೂ ಆಲಿಸಿದ ಸುರ್ಜೇವಾಲಾ ತಾವು ಈ ಬಗ್ಗೆ ಗಮನ ಹರಿಸಲಿದ್ದು ದುಡುಕಿ ನಿರ್ಧಾರ ಕೈಗೊಳ್ಳದಂತೆ ಹೇಳಿದರೆನ್ನಲಾಗಿದೆ.