ಬೆಂಗಳೂರು:
‘ಮರಾಠಿ ಪೇಶ್ವೆಗಳ ಮೂಲದ ವ್ಯಕ್ತಿಯನ್ನು ರಾಜ್ಯದ ಮೇಲೆ ಹೇರಲು BJP ಹೊರಟಿದೆ’ ಎಂದು ಕಿಡಿಕಾರಿರುವ JDS ನಾಯಕ ಕುಮಾರಸ್ವಾಮಿ ( H.D.Kumaraswamy) ‘ಮರಾಠಿ ಪೇಶ್ವೆಗಳ DNA ವ್ಯಕ್ತಿಯ ಬಗ್ಗೆ ನಾನು ಕೊಟ್ಟ ಹೇಳಿಕೆಯನ್ನು ವಾಪಸ್ ಪಡೆಯುವ ಪ್ರಶ್ನೆ ಇಲ್ಲ, ಕ್ಷಮೆಯನ್ನೂ ಕೇಳುವುದಿಲ್ಲ’ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರಿಗೆ ತಾಕತ್ತಿದ್ದರೆ, ನಾನು ಹೇಳಿದ ವ್ಯಕ್ತಿಯನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ಬಿಜೆಪಿಯವರು Electionಗೆ ಹೋಗಲಿ’ ಎಂದು ಸವಾಲು ಹಾಕಿದರು.
‘ಬ್ರಾಹ್ಮಣ, ದಲಿತ ಯಾವುದೇ ಸಮಾಜಕ್ಕೂ ಅಪಮಾನ ಮಾಡುವ ಕುಟುಂಬದಿಂದ ನಾನು ಬಂದಿಲ್ಲ. ಈ ದೇಶದ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ, ಪ್ರಧಾನಿ ಆಗಬಹುದು. ಆದರೆ, ನಿರ್ದಿಷ್ಟವಾದ ಈ ವ್ಯಕ್ತಿಯನ್ನು ಬಿಜೆಪಿಯವರು ಸಿಎಂ ಮಾಡಲು ಹೊರಟಿದ್ದಾರೆ. ನನಗೆ ಅವರ ಬಗ್ಗೆ ತಕರಾರು ಇಲ್ಲ, ತಕರಾರು ಇರುವುದು ಅವರ ಮೂಲದ ಬಗ್ಗೆ. ಪೇಶ್ವೆ DNA ವಿಷಯ ಎತ್ತಿರುವುದು ಯಾವುದೇ ದಾಳ ಉರುಳಿಸುವುದಕ್ಕೆ ಅಲ್ಲ. ಮುಂದಿನ ದಿನದ ಪರಿಸ್ಥಿತಿ ಏನಾಗಲಿದೆ ಅಂತ ಹೇಳಿದ್ದು. ಹುಬ್ಬಳ್ಳಿಗೆ ಪ್ರಧಾನಿ ಮೋದಿ ಅವರು ಬಂದಾಗ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ವೇದಿಕೆಗೇ ಹತ್ತಿಸಲಿಲ್ಲ. ಅಪಮಾನ ಮಾಡಿದರು. ಯಡಿಯೂರಪ್ಪ (BS Yediyurappa) ಅವರನ್ನು ಸಿಎಂ ಹುದ್ದೆಯಿಂದ ಯಾಕೆ ಇಳಿಸಿದರು? ಬಿಜೆಪಿ ಹೈಕಮಾಂಡ್ ಯಾವ ರೀತಿ ನಡೆದುಕೊಳ್ಳುತ್ತಿದೆ? ಮಾತನಾಡಿದರೆ ED, IT ಎಂದು ಹೆದರಿಸುತ್ತಾರೆ. ಅದರ ಹಿಂದೆ ಇರುವ ಕಾಣದ ಕೈಗಳು ಯಾವುವು ಎನ್ನುವ ಮಾಹಿತಿ ನನಗೂ ಇದೆ. ಕಳೆದ ಮೂರು ವರ್ಷಗಳಿಂದ ನಮ್ಮ ರಾಜ್ಯದಲ್ಲಿ ನಡೆದ ಒಂದೊಂದು ಘಟನೆಯನ್ನೂ ನೋಡಿ. ಕರ್ನಾಟಕಕ್ಕೂ ಸಾವರ್ಕರ್ ಗೂ ಸಂಬಂಧ ಏನು? ಸುವರ್ಣಸೌಧದಲ್ಲೂ ಸಾವರ್ಕರ್ ಫೋಟೊ ಹಾಕಲಾಯಿತು. ಈಗ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸಿದ, ಶೃಂಗೇರಿ ಮಠದ ಮೇಲೆ ದಾಳಿ ನಡೆಸಿದ, ಶಿವಾಜಿ ಮತ್ತು ಗಾಂಧೀಜಿ ಅವರನ್ನು ಹತ್ಯೆ ಮಾಡಿದ ಮರಾಠಿ ಪೇಶ್ವೆಗಳ ಮೂಲದ ವ್ಯಕ್ತಿಯನ್ನು ರಾಜ್ಯದ ಮೇಲೆ ಹೇರಲು ಬಿಜೆಪಿ ಹೊರಟಿದೆ. ಅದಕ್ಕೆ ನನ್ನ ವಿರೋಧವಿದೆ’ ಎಂದು ಸ್ಪಷ್ಟಪಡಿಸಿದರು.
‘ಬಿಜೆಪಿಯಿಂದ ಯಾರು ಮುಖ್ಯಮಂತ್ರಿ ಆಗಬೇಕು ಎಂದು ನಾನು ಹೇಳಿಲ್ಲ. ಅವರು ಯಾರನ್ನು ಬೇಕಾದರೂ ಸಿಎಂ ಮಾಡಿಕೊಳ್ಳಲಿ. ಬೇಕಾದರೆ ಪ್ರಹ್ಲಾದ್ ಜೋಷಿ ಅವರನ್ನೇ ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ. ಬಿಜೆಪಿ ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿದೆ. ಮೀಸಲಾತಿ ವಿಚಾರದಲ್ಲೂ ಗೊಂದಲ ಸೃಷ್ಟಿ ಮಾಡಿದ್ದಾರೆ. ಮೂಗಿಗೆ ತುಪ್ಪ ಸವರುವ ಜನರನ್ನು ನಾವು ನೋಡಿದ್ದೇವೆ. ಇವರು ಈಗ ತಲೆಗೆ ತುಪ್ಪ ಸವರಿದ್ದಾರೆ, ಜನರಿಗೆ ವಾಸನೆ ಕೂಡ ಗೊತ್ತಾಗಬಾರದು ಎನ್ನುವ ಉದ್ದೇಶ ಇವರದ್ದು. ಹಿಂಬಾಗಿಲಿನಿಂದ ರಾಜಕೀಯ ಮಾಡ್ತಾ ಇದ್ದಾರೆ’ ಎಂದು ಟೀಕಾಪ್ರಹಾರ ನಡೆಸಿದರು.
ಬಿಜೆಪಿ ಮುಖಂಡ ಸಿ.ಟಿ.ರವಿ (C T Ravi) ವಿರುದ್ಧ ವಾಗ್ದಾಳಿ ನಡೆಸಿದ ಅವರು ‘ಅಮಾಯಕ ಕುಟುಂಬದ ಮೇಷ್ಟ್ರು ಒಬ್ಬರು KRS ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಅವರು ಯಾಕೆ ಸತ್ತರು? ಅದಕ್ಕೂ, ಸಿಟಿ ರವಿ ಅವರಿಗೆ ಇರುವ ಸಂಬಂಧ ಏನು? ಇದಕ್ಕೆ ಅವರು ಯಾಕೆ ಉತ್ತರ ಕೊಡುತ್ತಿಲ್ಲ?’ ಎಂದು ಪ್ರಶ್ನಿಸಿದರು.