ಫೇಸ್ಬುಕ್ ನಲ್ಲಿ ಯುವಕನೊರ್ವನಿಗೆ ತಾನು ಯುವತಿ ಎಂದು ನಂಬಿಸಿ, ಆತನಿಗೆ ಮದುವೆಯಾಗುವುದಾಗಿ ಭರವಸೆ ನೀಡಿ 50 ವರ್ಷದ ಮಹಿಳೆಯೊಬ್ಬಳು ಆತನಿಗೆ 3.50 ಲಕ್ಷ ರೂಗಳನ್ನು ವಂಚಿಸಿ ಸಿಕ್ಕಿಬಿದ್ದ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ನಡೆದಿದ್ದು, ಎರಡು ದಿನದ ಬಳಿಕ ತಡವಾಗಿ ಬೆಳಕಿ ಗೆ ಬಂದಿದೆ.
ಹೌದು! ಮಂಡ್ಯದ ಮೂಲದ 50 ವರ್ಷದ ಮಹಿಳೆಯೊಬ್ಬಳು ಫೇಸ್ಬುಕ್ ನಲ್ಲಿ ನಾಗಮಂಗಲ ತಾಲೂಕಿನ ಯುವಕನೋರ್ವನಿಗೆ ಕಮಲಾ ಎಂಬ ಹೆಸರಿನಲ್ಲಿ ಪರಿಚಯವಾಗಿದ್ದಾಳೆ. ಆ ವೇಳೆ ಆಕೆ ತಾನು ಆಶಾ, ತುಮಕೂರಿನ ಮಲ್ಲಸಂದ್ರ ಗ್ರಾಮದವಳೆಂದು ಪರಿಚಯಿಸಿಕೊಂಡಿದ್ದಾಳೆ. ಇಬ್ಬರ ನಡುವೆ ಸ್ನೇಹ ಸಲುಗೆ ಹೆಚ್ಚಾಗಿ ಯುವಕನನ್ನು ಮದುವೆಯಾಗುವುದಾಗಿ ನಂಬಿಸಿದ್ದಾಳೆ. ಅಲ್ಲದೇ ಆತನಿಂದ ತನ್ನ ಕುಟುಂಬ ಕಷ್ಟದಲ್ಲಿದೆ ತಾನು ಕಷ್ಟದಲ್ಲಿ ಸಿಲುಕಿದ್ದೀನಿ ಎಂದು ನಂಬಿಸಿ ಹಂತ ಹಂತವಾಗಿ 350 ಲಕ್ಷ ರೂಗಳನ್ನು ತನ್ನ ಖಾತೆಗೆ ಹಣ ಹಾಕಿಸಿಕೊಂಡಿದ್ದಾಳೆ. ಮದುವೆಯ ಆಸೆಯಿಂದ ಹಣ ನೀಡಿದ್ದ ಯುವಕ ಕಡೆಗೆ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾನೆ. ಈ ವೇಳೆ ಮದುವೆಗೆ ಹಿಂದೆ ಮುಂದೆ ನೋಡಿದಾಗ ಈ ವೇಳೆ ಯುವಕ ಮದುವೆ ಆಗದಿದ್ದರೆ ಕೊಟ್ಟಿರುವ ಹಣ ವಾಪಸ್ಸು ಕೊಡುವಂತೆ ಕೇಳಿದ್ದಾನೆ.
ಇನ್ನು ಮದುವೆ ಪ್ರಸ್ತಾಪ ಬರುತ್ತಿದ್ದಂತೆ ಬೇರೊಂದು ಯುವಕನ ನಂಬರಿನಿಂದ ಆ ಯುವಕನಿಗೆ ಕರೆ ಮಾಡಿದ ಈ ಮಹಿಳೆ, ಧ್ವನಿ ಬದಲಾಯಿಸಿ ತಾನು ಹುಡುಗಿಯ ದೊಡ್ಡಮ್ಮ ಸವಿತಾ ಕಲ್ಲಹಳ್ಲಿಯವರು ಎಂದು ಪರಿಚಯಿಸಿಕೊಂಡಿದ್ದಾಳೆ. ಅಲ್ಲದೆ ನಾಗಮಂಗಲ ತಾಲೂಕಿನಲ್ಲಿರುವ ಯುವಕನ ಮನೆಗೆ ತೆರಳಿ ಮದುವೆ ಮಾತುಕತೆ ಮಾಡಿದ್ದಾಳೆ. ಹುಡುಗಿಗೆ ಯಾರು ಇಲ್ಲ ತಾನೆ ಮುಂದೆ ನಿಂತು ಮದುವೆ ಮಾಡಬೇಕಿದೆ ಎಂದು ಮದುವೆ ಪ್ರಸ್ತಾಪ ಮಾತಾಡಿ ಮದುವೆ ದಿನ ನಿಶ್ಚಿತಾರ್ಥ ಮಾಡಿಕೊಳ್ಳೋಣ ಎಂದು ಹೇಳಿ ಚುಂಚುನಗಿರಿಯಲ್ಲಿ ಮೇ-20ಕ್ಕೆ ದಿನಾಂಕ ನಿಗದಿ ಪಡಿಸಿಕೊಂಡು ಬಂದಿದ್ದಾಳೆ.
ಇನ್ನು ಯುವಕನ ಮನೆಯಲ್ಲಿ ಮದುವೆ ಸಿದ್ದತೆ ನಡೆದು ನೆಂಟರಿಷ್ಟರಿಗೆಲ್ಲ ಲಗ್ನಪತ್ರಿಕೆ ಹಂಚಿದ ಯುವಕನ ಕಡೆಯವರು ಮದುವೆಗೆಂದು ಮೇ19ರಂದು ಯುವಕ ಸೇರಿ ಆತನ ಪೋಷಕರು ಸಂಬಂಧಿಕರು ಚುಂಚನಗಿರಿಗೆ ಬಂದಿದ್ದಾರೆ. ಮದುವೆ ಹಿಂದಿನ ರಾತ್ರಿ ನಿಶ್ಚಿತಾರ್ಥ ಮಾಡಿಕೊಳ್ಳೊಣ ಎಂದಿದ್ದಕ್ಕೆ ಸಿದ್ದತೆ ಮಾಡಿಕೊಂಡು ಯುವತಿ ಹಾಗು ಸಂಬಂಧಿಕರ ಬರುವಿಕೆ ಕಾದಿದ್ದಾರೆ. ರಾತ್ರಿಯಾದರೂ ಯುವತಿ ಹಾಗು ಅವರ ಸಂಬಂಧಿಕರು ಬರದಿದ್ದರಿಂದ ಆತಂಕಗೊಂಡ ಯುವಕ ಹಾಗು ಸಂಬಂಧಿಕರು ಆ ಯುವತಿ ನಂಬರಿಗೆ ಕರೆ ಮಾಡಿದ್ದಾರೆ. ಆ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ದೊಡ್ಡಮ್ಮ ಎಂದು ಪರಿಚಯಿಸಿಕೊಂಡಿದ್ದ ಈ ಮಹಿಳೆಗೆ ಕರೆ ಮಾಡಿದಾಗ ಆ ಮಹಿಳೆ ಮತ್ತೊಂದು ನಾಟಕ ಆಡಿದ್ದಾಳೆ. ಮದುವೆಯಾಗಬೇಕಿದ್ದ ಯುವತಿ ಕಮಲಳನ್ನು ಅವರ ಮಾವಂದಿರು ಹಾಗು ದೊಡ್ಡಂಪ್ಪದಿರು ಎಳೆದೊಯ್ದಿದ್ದು ಬಚ್ಚಿಟ್ಟಿದ್ದಾರೆ ಎಂದು ತಿಳಿಸಿದ್ದಾಳೆ. ಅಲ್ಲದೆ ಮದುವೆಯನ್ನ ಮುಂದೂಡಿ ಇನ್ನೊಂದು ವಾರದಲ್ಲಿ ಆ ಹುಡುಗಿಯನ್ನು ಎಲ್ಲಿದ್ದಾಳೆಂದು ಪತ್ತೆ ಹಚ್ಚಿ ಮದುವೆ ಮಾಡಿಸುವುದಾಗಿ ತಿಳಿಸಿದ್ದಾಳೆ.
ಈ ಮಹಿಳೆಯ ಮಾತಿನಿಂದ ಅನುಮಾನಗೊಂಡ ಯುವಕ ಹಾಗು ಆತನ ಸಂಬಂಧಿಕರು ಈ ಸಂಬಂಧ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಆ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಆರಂಭಿಸಿದಾಗ ಆ ಮಹಿಳೆ ತಾನು ಆ ಯುವಕನಿಗೆ ಯುವತಿ ಹೆಸರಲ್ಲಿ ವಂಚಿಸಿರುವುದಾಗಿ ತಿಳಿಸಿ ತಪ್ಪೊಪ್ಪಿಕೊಂಡಿದ್ದಾಳೆ. ಪೊಲೀಸರು ಈ ಸತ್ಯವನ್ನು ಯುವಕ ಮತ್ತು ಆತನ ಪೋಷಕರಿಗೆ ತಿಳಿಸಿದಾಗ ಯುವಕ ಸೇರಿ ಆತನ ಪೋಷಕರು ಬೇಸ್ತು ಬಿದ್ದಿದ್ದಾರೆ. ಕಡೆಗೆ ಆ ಮಹಿಳೆ ವಂಚಿಸಿರುವ ಹಣ ವಾಪಸ್ಸು ಕೊಡಿಸುವಂತೆ ಕೇಳಿದ್ದಾರೆ. ತಾನು ವಂಚನೆ ಮಾಡಿರುವ ಹಣವನ್ನು ಕೊಡುವುದಾಗಿ ಒಪ್ಪಿ ಈ ಮಹಿಳೆ ಮುಚ್ಚಳಿಕೆ ಬರೆದುಕೊಟ್ಟಿದ್ದು ಯುವಕನ ಭವಿಷ್ಯದ ದೃಷ್ಟಿಯಿಂದ ಪ್ರಕರಣ ದಾಖಲಿಸದೆ ರಾಜಿ ಮಾಡಿ ಕಳಿಸಿದ್ದಾರೆ.
ಒಟ್ಟಾರೆ ಫೇಸ್ಬುಕ್ ನ ಫೋಟೋ ಆಕೆಯನ್ನು ಮದುವೆಯಾಗುವ ಆಸೆಯಲ್ಲಿದ್ದ ನಾಗಮಂಗಲದ ಈ ಯುವಕ ಇದೀಗ ತಾನು ಮೋಸ ಹೋಗಿದ್ದು ಮಹಿಳೆಯಿಂದ ತಿಳಿದು ಬೇಸ್ತು ಬೀಳೋದರ ಜೊತೆಗೆ ಪೇಸ್ಬುಕ್ ಪ್ರೀತಿಯಿಂದ ಲಕ್ಷಾಂತರ ರೂ ಹಣ ಕಳೆದುಕೊಂಡಿದ್ದು ನಿಜಕ್ಕೂ ವಿಪರ್ಯಾಸ.