ಬೆಂಗಳೂರು:
ನೀವು ಚಾಪೆ ಕೆಳಗೆ ತೂರಿದರೆ ನಾವು ರಂಗೋಲಿ ಕೆಳಗೆ ತೂರುತ್ತೇವೆ ಎಂಬ ಗಾದೆ ಮಾತಿನಂತಹ ಸುದ್ದಿ ಇದು. ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ನಿರ್ದೇಶನದ ಮೇರೆಗೆ ಕರ್ನಾಟಕದಲ್ಲಿ ಸೋಮವಾರದಿಂದ ಅಧಿಕೃತವಾಗಿ 8 ಲಕ್ಷಕ್ಕೂ ಅಧಿಕ ಬೈಕ್‌ಟ್ಯಾಕ್ಸಿಗಳು ಸ್ಥಗಿತಗೊಂಡಿವೆ. ಹೀಗಾಗಿ ಇನ್ನು ಮುಂದೆ ಬೈಕ್ ಟ್ಯಾಕ್ಸಿಗಳು ಕಾಣಿಸಿಕೊಂಡರೆ ಸಾರಿಗೆ ಇಲಾಖೆ ಅಧಿಕಾರಿಗಳು ಬಲೆ ಬೀಸುತ್ತಿದ್ದಾರೆ. ರಸ್ತೆಗಿಳಿದ ಕೆಲವು ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ ಇದರಿಂದಾಗಿ ಬೈಕ್ ಟ್ಯಾಕ್ಸಿ ವ್ಯವಸ್ಥೆ ಸ್ಥಗಿತಗೊಂಡಿದೆ ಎಂದು ಭಾವಿಸಿದ್ದರೆ ಅದು ಖಂಡಿತ ಸುಳ್ಳು.
ಅಧಿಕೃತವಾಗಿ ಬೈಕ್ ಟ್ಯಾಕ್ಸಿಗಳು ಓಡಾಡುತ್ತಿಲ್ಲ. ಆದರೆ ಬೆಂಗಳೂರಿನಲ್ಲಿ ಎಂದಿನಂತೆ ಬೈಕ್ ಟ್ಯಾಕ್ಸಿಗಳು ಓಡಾಡುತ್ತಿವೆ ಅದು ಹೇಗೆಂದರೆ ಸರಕು ಸಾಗಾಣಿಕೆ ಮತ್ತು ಪಾರ್ಸೆಲ್ ಸೇವೆ ಹೆಸರಿನಲ್ಲಿ ಬೈಕ್ ಟ್ಯಾಕ್ಸಿಗಳು ಓಡಾಡುತ್ತಿವೆ.
ಬೈಕ್ ಟ್ಯಾಕ್ಸಿಯ ಚಾಲಕ ತನ್ನ ಹಿಂಭಾಗದಲ್ಲಿ ಕುಳಿತ ವ್ಯಕ್ತಿಯನ್ನು ಪ್ರಯಾಣಿಕ ಎನ್ನುವುದಿಲ್ಲ ಬದಲಿಗೆ ಪಾರ್ಸೆಲ್ ಕೊಂಡೊಯ್ಯುತ್ತಿರುವ ವ್ಯಕ್ತಿ.ಸರಕು ಸಾಗಾಣಿಕೆ ಮಾಡಲು ಹೋಗುತ್ತಿದ್ದೇವೆ ಎಂದು ತಮ್ಮನ್ನು ಕೇಳಿದ ಸಂಚಾರಿ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹೇಳುತ್ತಾರೆ.
ಅತ್ಯಂತ ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲಿ ಈ ರೀತಿಯ ರಂಗೋಲಿ ಕೆಳಗೆ ನುಸುಳುವ ಕೆಲಸ ನಡೆಯುತ್ತಿದೆ.
ಕ್ಷಿಪ್ರವಾಗಿ ಕಡಿಮೆ ದರದಲ್ಲಿ ತಾವು ಹೋಗಬೇಕಾದ ಸ್ಥಳಗಳಿಗೆ ತಲುಪಲು ಅನೇಕ ಮಂದಿ ಪ್ರಯಾಣಿಕರು ಪಾರ್ಸೆಲ್ ಸೇವೆ ಹೆಸರಿನಲ್ಲಿ ಬೈಕ್ ಟ್ಯಾಕ್ಸಿ ಬಳಸತೊಡಗಿದ್ದಾರೆ.