ಬೆಂಗಳೂರು – ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಕಾಣುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಭೀತಿ ಕಾಡುತ್ತಿದೆ. ಗೊಂದಲದಲ್ಲಿ ಬಿದ್ದಿದ್ದಾರೆ.ಹಿತೈಷಿಗಳು, ಬೆಂಬಲಿಗರು ಹಲವು ಸಲಹೆಗಳನ್ನು ನೀಡುತ್ತಿದ್ದಾರೆ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿರುವ ನಾಯಕ ಯಾವ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ.
ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಹಿಗ್ಗಾಮುಗ್ಗಾ ಪ್ರಹಾರ ನಡೆಸುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅದ್ಯಾವ ಭಯ ಅಂತಿರಾ..ಅವರಿಗೆ ಭಯವಿಲ್ಲ ಎನ್ನುತ್ತೀರಾ.. ನಿಜವೇ ಅವರಿಗಿರುವುದು ಅಂತಿಂತಾ ಭಯವಲ್ಲ ಅದು ಚುನಾವಣೆಯಲ್ಲಿ ಸೋಲುವ ಭೀತಿ.
ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಅವರಿಗೆ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಅಷ್ಟೇ ಅಲ್ಲ
ಸ್ವಪಕ್ಷೀಯರಿಂದಲೂ ಸೋಲುವ ಭೀತಿ ಎದುರಾಗಿದೆ. ಸಿದ್ದರಾಮಯ್ಯ ಅವರನ್ನು ಸೋಲೆಂಬ ಖೆಡ್ಡಾಕ್ಕೆ ಕೆಡವಲು ವ್ಯವಸ್ಥಿತ ತಯಾರಿ ಕೂಡಾ ನಡೆದಿದೆ. ಇದು ಸಿದ್ದರಾಮಯ್ಯ ಅವರನ್ನು ಚಿಂತೆಗೀಡು ಮಾಡಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ತಾವು ಆಯ್ಕೆಯಾಗಿದ್ದ ಮೈಸೂರಿನ ವರುಣಾ ಕ್ಷೇತ್ರವನ್ನು ತಮ್ಮ ಪುತ್ರನಿಗೆ ಬಿಟ್ಟು ಕೊಟ್ಟ ಅವರ ನೆರೆಯ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿದ ಅವರು ಅಲ್ಲಿ ಸೋಲುವ ಭೀತಿಯಿಂದ ಬಾಗಲಕೋಟೆಯ ಬಾದಾಮಿಯಿಂದ ಕಣಕ್ಕಿಳಿದರು.
ಚಾಮುಂಡೇಶ್ವರಿಯಲ್ಲಿ ಒಂದು ಕಾಲದ ತಮ್ಮ ಆಪ್ತ ಜೆಡಿಎಸ್ ನ ಜಿ.ಟಿ.ದೇವೇಗೌಡ ವಿರುದ್ಧ ದಯನೀಯ ಸೋಲು ಕಂಡ ಸಿದ್ದರಾಮಯ್ಯ ಬಾದಾಮಿಯಲ್ಲಿ ಬಿಜೆಪಿಯ ಶ್ರೀರಾಮುಲು ಅವರಿಂದ ತೀವ್ರ ಪೈಪೋಟಿ ಎದುರಿಸಿ ಪ್ರಯಾಸದ ಗೆಲುವು ದಾಖಲಿಸಿದರು.
ಯಾವುದೇ ಗಂಭೀರ ಸ್ವರೂಪದ ಭ್ರಷ್ಟಾಚಾರದ ಆರೋಪಗಳಿಲ್ಲದೆ ಭಿನ್ನಮತದ ಕಾಟವಿಲ್ಲದೆ ದಕ್ಷ ಆಡಳಿತ ನೀಡಿ ಜನ ಸಾಮಾನ್ಯರಿಗೆ ಹಲವು ಕೊಡುಗೆ ನೀಡುವ ಮೂಲಕ ಭಾಗ್ಯಗಳ ಸರದಾರ ಎಂದೇ ಪ್ರಶಂಸಿಲ್ಪಟ್ಟ ಸಿದ್ದರಾಮಯ್ಯ ಮತ್ತೊಂದು ಅವಧಿಗೆ ಶಾಸಕರಾಗಲು ಇಷ್ಟೊಂದು ಕಸರತ್ತು ಮಾಡಬೇಕಾಯಿತು.
ಇದೀಗ ಪ್ರತಿಪಕ್ಷ ನಾಯಕರಾಗಿದ್ದು, ಆಡಳಿತ ವಿರೋಧಿ ಅಲೆ,ಭ್ರಷ್ಟಾಚಾರ ಆರೋಪದಿಂದ ತತ್ತರಿಸಿರುವ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಮನೆಗೆ ಕಳುಹಿಸಿ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವ ಕನಸು ಕಾಣಿತ್ತಿರುವ ಸಿದ್ದರಾಮಯ್ಯ ಇದೀಗ ಕ್ಷೇತ್ರಕ್ಕಾಗಿ ಪರದಾಡುವಂತಾಗಿದೆ.
ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಾಯಕ ಇದೀಗ ಪ್ರತಿಪಕ್ಷ ನಾಯಕನಾಗಿ ತನ್ನ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಹಂತಕ್ಕೆ ಕೊಂಡೊಯ್ದಿರುವಾಗ ತಾನು ಎಲ್ಲಿಂದ ಸ್ಪರ್ಧಿಸಬೇಕು ಎಂಬ ಚರ್ಚೆಯ ಸುಳಿಗೆ ಸಿಲುಕಿರುವುದು ಮಾತ್ರ ವಿಚಿತ್ರ.
ಕಳೆದೊಂದು ವರ್ಷದ ಹಿಂದೆಯೇ ತಾವು ಈ ಬಾರಿ ಬಾದಾಮಿಯಿಂದ ಸ್ಪರ್ಧಿಸಬಾರದು ಎಂಬ ನಿರ್ಧಾರಕ್ಕೆ ಬಂದ ಸಿದ್ದರಾಮಯ್ಯ ಬೆಂಗಳೂರಿನ ಹೆಬ್ಬಾಳ, ಚಾಮರಾಜ ಪೇಟೆ ಕ್ಷೇತ್ರಗಳಲ್ಲಿ ಹಲವು ಸುತ್ತಿನ ಪ್ರವಾಸ ಮಾಡಿ ಮತದಾರರ ನಾಡಿ ಮಿಡಿತ ಅರಿಯುವ ಪ್ರಯತ್ನ ಮಾಡಿದರು. ಇಲ್ಲಿಂದ ಗೆಲುವು ಕಷ್ಟ ಎನಿಸಿದಾಗ ಮತ್ತೆ ಬಾದಾಮಿಯೇ ಸೂಕ್ತ ಎಂದು ಅಲ್ಲಿಯೂ ಬಿರುಸಿನ ಪ್ರವಾಸ ಮಾಡಿದರು ಆದರೆ ಇಲ್ಲಿನ ಲಿಂಗಾಯತ ಮತ್ತು ವಾಲ್ಮೀಕಿ ಸಮುದಾಯ ಇವರ ವಿರುದ್ಧ ಇದೆ ಎಂಬ ವಾಸ್ತವಿಕ ಸಂಗತಿ ಅರಿತವರೇ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ಸೂಕ್ತ ಎಂದು ತಮ್ಮ ಹಳೆಯ ಮಿತ್ರ ಜಿ.ಟಿ.ದೇವೇಗೌಡ ಜೊತೆಗೆ ಸಂಧಾನ ಮಾಡಿಕೊಂಡು ಅವರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ಮಾಡಿದರೂ ಅದು ಕೈಗೂಡಲಿಲ್ಲ.
ಇದರ ನಡುವೆ ಹರಿಹರ,ತುಮಕೂರು,ಹೊಸಪೇಟೆ ಕ್ಷೇತ್ರಗಳ ಬಗ್ಗೆ ಮಾಹಿತಿ ಪಡೆದು ಸಮೀಕ್ಷೆ ಮಾಡಿಸಿದರು ಆದರೆ ಎಲ್ಲಿಯೂ ಅನುಕೂಲಕರ ಎಂಬ ವಾತಾವರಣ ಕಾಣದಿದ್ದಾಗ ಬೆಂಗಳೂರಿಗೆ ಸ್ವಲ್ಪ ದೂರದಲ್ಲಿರುವ ಕೋಲಾರ ಸೂಕ್ತ ಎನಿಸಿ ಅಲ್ಲಿ ಸಮೀಕ್ಷೆ ಮಾಡಿಸಿದಾಗ ಅನುಕೂಲಕರ ವಾತಾವರಣವಿರುವುದಾಗಿ ತಿಳಿದು ಇಲ್ಲಿಂದ ಕಣಕ್ಕಿಳಿಯುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದರು.
ಇದಕ್ಕಾಗಿ ಜನರ ನಾಡಿಮಿಡಿತ ತಿಳಿಯಲು ಕೋಲಾರಕ್ಕೆ ಧಾವಿಸಿದರು. ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದಿದ್ದಾರೇನೋ ಎಂಬಂತೆ ದಿನವಿಡೀ ಸುತ್ತಾಡಿ ಸ್ಪರ್ಧೆಯ ಸುಳಿವು ನೀಡಿದರು.
ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರ ಸುರಕ್ಷಿತವೇ ಎಂಬ ಪ್ರಶ್ನೆ ಎದುರಾಗಿ, ರಾಜ್ಯ ರಾಜಕೀಯದ ಚಿತ್ತ ಚಿನ್ನದ ಗಣಿಯ ನಾಡಿನತ್ತ ಹರಿಯುವಂತೆ ಮಾಡಿತು
ಈ ಕ್ಷೇತ್ರದಲ್ಲಿ 2004ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೇ ಕೊನೆ. ಮತ್ತೆ ಇಲ್ಲಿ ಪಕ್ಷಕ್ಕೆ ಗೆಲುವು ಒಲಿದಿಲ್ಲ. ಬರೋಬ್ಬರಿ 19 ವರ್ಷಗಳಾಗಿದ್ದು, ಪಕ್ಷದ ಕಾರ್ಯಕರ್ತರು ಚದುರಿ ಹೋಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಎಚ್. ಮುನಿಯಪ್ಪ ಸೋತಿರುವ ಉದಾಹರಣೆಯೂ ಮುಂದಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎರಡು ಬಣಗಳಿದ್ದು, ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ಮುನಿಯಪ್ಪ ಬೆಂಬಲಿಗರು ಹಾಗೂ ಸಿದ್ದರಾಮಯ್ಯ ಜತೆ ಗುರುತಿಸಿಕೊಂಡಿರುವ ಶಾಸಕ ಕೆ.ಆರ್.ರಮೇಶ್ ಕುಮಾರ್ ಬೆಂಬಲಿಗರು ನಿತ್ಯ ಹಾವು–ಮುಂಗುಸಿ ರೀತಿ ಕಚ್ಚಾಡುತ್ತಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಮುಂದಿನ ದಿನಗಳಲ್ಲಿ ಮುನಿಯಪ್ಪ–ಸಿದ್ದರಾಮಯ್ಯ–ರಮೇಶ್ ಕುಮಾರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡೂ ಅವರ ಬೆಂಬಲಿಗರು ಹೊಂದಾಗುತ್ತಾರೆಯೇ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ನಡೆಯಿತು.
ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಮತದಾರರು ಹೆಚ್ಚಿರುವ ಈ ಕ್ಷೇತ್ರವೂ ‘ಅಹಿಂದ’ ನಾಯಕ ಎನಿಸಿಕೊಂಡಿರುವ ಅವರಿಗೆ ಹೇಳಿ ಮಾಡಿಸಿದಂತಿದೆ ಮುಖ್ಯಮಂತ್ರಿ ಆಗಿದ್ದಾಗ ಜಾರಿ ಮಾಡಿದ ಕೆ.ಸಿ.ವ್ಯಾಲಿಯಿಂದ ಕ್ಷೇತ್ರದ ಕೆರೆಗಳು ತುಂಬಿದ್ದು, ರೈತರಿಗೆ ಪ್ರಯೋಜನವೂ ಆಗಿದೆ.
ಅಲ್ಲದೆ ಇಲ್ಲಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಜಿಲ್ಲೆಯ ಇತರೆ ಕ್ಷೇತ್ರಗಳು, ಪಕ್ಕದ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಿಗೂ ನೆರವಾಗಬಲ್ಲದು ಎನ್ನಲಾಗುತ್ತಿತ್ತು.
ಆದರೆ ಇದಲ್ಲವೂ ಆರಂಭಿಕ ಲೆಕ್ಕಾಚಾರವಾಗಿತ್ತು ಸಿದ್ದರಾಮಯ್ಯ ಕ್ಷೇತ್ರದಲ್ಲಿ ಸುತ್ತಾಡಿ ಹೋದ ನಂತರದ ಚಿತ್ರಣ ಬದಲಾಯಿತು.ಜಿಲ್ಲಾ ಕಾಂಗ್ರೆಸ್ ನ ಬಣ ರಾಜಕಾರಣ ತಾರಕಕ್ಕೇರಿತು ಇದರಿಂದಾಗಿ ಸಿದ್ದರಾಮಯ್ಯ ಇಲ್ಲಿ ಬಲಿಪಶುವಾಗಲಿದ್ದಾರೆಂಬ ವರದಿಗಳು ಬಂದವು.
ಎಲ್ಲಿಯೋ ಒಂದು ಸುರಕ್ಷಿತ ಕ್ಷೇತ್ರ ಸಿಕ್ಕಿತು ಎಂದು ಬೇರೆ ಚಟುವಟಿಕೆ ಕಡೆ ಸಿದ್ದರಾಮಯ್ಯ ಗಮನ ಹರಿಸುವ ಸಮಯದಲ್ಲಿ ಚಿನ್ನದ ನಾಡಿನಿಂದ ಬಂದ ಸಮೀಕ್ಷಾ ವರದಿ ಮಾಜಿ ಮುಖ್ಯಮಂತ್ರಿಯನ್ನು ಬೆಚ್ಚಿ ಬೀಳಿಸಿತು.
ಇದೀಗ ಸಣ್ಣ ಸರ್ಜರಿಯಿಂದ ಚೇತರಿಸಿಕೊಂಡಿರುವ ಮತ್ತೆ ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ.ಈ ಬಾರಿ ತಮ್ಮ ಪುತ್ರ ಯತೀಂದ್ರ ತಮ್ಮ ತಂದೆಗಾಗಿ ಕ್ಷೇತ್ರ ತ್ಯಾಗಕ್ಕೆ ಮುಂದಾಗಿದ್ದಾರೆ.ಸಿದ್ದರಾಮಯ್ಯ ಪುತ್ರ ವ್ಯಾಮೋಹದಿಂದ ಮುಕ್ತರಾಗಿ ವರುಣಾದಿಂದ ಕಣಕ್ಕಿಳಿಯುವುದು ಸೂಕ್ತ ಎಂಬ ವರದಿಗಳು ಸಿದ್ದರಾಮಯ್ಯ ಆಪ್ತ ವಲಯ ನೀಡಿದೆ. ಆದರೂ ಸವಾಲು ಎದುತಿಸುವ ಸಮಯದಲ್ಲಿ ಕಡಿಮೆ ಸಂಖ್ಯೆಯ ಪ್ರತಿರೋಧವಿರಬೇಕು ಎಂಬ ಸಲಹೆ ಹಿನ್ನೆಲೆಯಲ್ಲಿ ಮೈಸೂರಿನ ಪ್ರಭಾವಿ ನಾಯಕ ಒಂದು ಕಾಲದ ತಮ್ಮ ಆಪ್ತ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಅವರೊಂದಿಗಿನ ವೈಮನಸ್ಯ ಮರೆತು ಸ್ನೇಹ ಹಸ್ತ ಚಾಚಿದ್ದಾರೆ.ಆದರೂ ಕ್ಷೇತ್ರದ ಬಗೆಗೆ ಇನ್ನೂ ಗಟ್ಟಿಯಾದ ನಿಲುವು ತಳೆಯಲಾಗಿಲ್ಲ.
ರಾಜ್ಯ ಮಟ್ಟದ ಪ್ರಭಾವಿ ನಾಯಕರಾದರೂ ತಾವು ಪ್ರತಿನಿಧಿಸುವ ಕ್ಷೇತ್ರದಲ್ಲೂ ಅಂತಹದೆ ಪ್ರಭಾವ ಉಳಿಸಿಕೊಂಡ ನಾಯಕರೆಂದರೆ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್.ಬಂಗಾರಪ್ಪ ಸೊರಬದಲ್ಲಿ ಧರ್ಮಸಿಂಗ್ ಜೇವರ್ಗಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಶಿಕಾರಿಪುರದಲ್ಲಿ ಚುನಾವಣೆ ಸಮಯದಲ್ಲಿ ಒಂದೆರಡು ಬಾರಿ ಪ್ರವಾಸ ಮಾಡಿದರೆ ಸಾಕು ಗೆಲವು ಸುಲಭ ಎಂಬಷ್ಟರ ಮಟ್ಟಿಗೆ ಪ್ರಭಾವಗಳು ಇವರನ್ನು ಹೊರತುಪಡಿಸಿದರೆ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ, ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರದ್ದು ಈಗಿನ ಸಿದ್ದರಾಮಯ್ಯ ಅವರಂತಹದೆ ಪರಿಸ್ಥಿತಿ. ಮನೆಗೆದ್ದು ಮಾರುಗೆಲ್ಲು ಎಂಬ ನಾಣ್ನುಡಿಯನ್ನು ಈ ನಾಯಕರು ಮರೆತ ಪರಿಣಾಮ ಇಂತಹ ಪರಿಸ್ಥಿತಿ ಎಂದು ಸುಲಭವಾಗಿ ಹೇಳಬಹುದಾದರೂ ರಾಜಕೀಯ ಒಳಸುಳಿಯಲ್ಲಿ ಸಿಲುಕಿ ಇವರು ಉರುಳಿಸಿದ ದಾಳಗಳು ಯಾವಾಗ ಹೇಗೆ ತಿರುಗುಬಾಣವಾಗಲಿವೆಯೋ ಎಂಬುದನ್ನು ಊಹಿಸಲಾಗದ ಸ್ಥಿತಿ.
Previous Articleಪಂಜಾಬ್ ಪೊಲೀಸ್ ಠಾಣೆ ಮೇಲೆ ಪಾಕ್ ಗ್ರನೇಡ್ ದಾಳಿ
Next Article ಲವ್ ಜಿಹಾದ್ ತಡೆಗೆ ವಿಶೇಷ ತಂಡ