ಬೆಂಗಳೂರು,ಫೆ.28-
ಮಹಾರಾಷ್ಟ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಮೇಲೆ ಶಿವಸೇನೆ ಕಾರ್ಯಕರ್ತರು ನಡೆಸುತ್ತಿರುವ ದಾಳಿ ಮತ್ತು ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ನಡೆಸುತ್ತಿರುವ ಪುಂಡಾಟಿಕೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ಬಂದ್ ನಡೆಸಲು ಕನ್ನಡ ಪರ ಹೋರಾಟಗಾರರು ತೀರ್ಮಾನಿಸಿದ್ದಾರೆ.
ಮಾಜಿ ಶಾಸಕ ಹಾಗೂ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಸಾರಾ ಗೋವಿಂದು ನೇತೃತ್ವದಲ್ಲಿ ಸಭೆ ಸೇರಿದ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಮಾರ್ಚ್ 22ರಂದು ಕರ್ನಾಟಕ ಬಂದ್ ನಡೆಸಲು ತೀರ್ಮಾನಿಸಿದರು.
ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಕರ್ನಾಟಕದಲ್ಲಿ ಕನ್ನಡಿಗನೇ ತಬ್ಬಲಿಯಾಗುವಂತಹ ಸ್ಥಿತಿ ನಿರ್ಮಾಣವಾಗಿದೆ ಬೆಳಗಾವಿ ಸೇರಿದಂತೆ ರಾಜ್ಯದ ಗಡಿ ಪ್ರದೇಶಗಳಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆಪಾದಿಸಿದರು.
ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರಿಂದ ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ನಾಡ ವಿರೋಧಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಇಂದಿನ ಸಭೆ ತೀರ್ಮಾನಿಸಿದೆ ಎಂದು ಹೇಳಿದರು.
ಮಹಾರಾಷ್ಟ್ರ ಮತ್ತು ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳ ನೌಕರರ ಮೇಲೆ ನಡೆಯುತ್ತಿರುವ ದಾಳಿ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯ ಮೇಕೆದಾಟು ಮಹದಾಯಿ ಯೋಜನೆಗಳಿಗೆ ಶೀಘ್ರ ಅನುಮತಿ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಮಾರ್ಚ್ ತಿಂಗಳಿನಲ್ಲಿ ಸರಣಿ ಹೋರಾಟ ಹಮ್ಮಿಕೊಳ್ಳಲು ಕನ್ನಡಪರ ಹೋರಾಟಗಾರರು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಮಾರ್ಚ್ 03 ರ ಬೆಳಗ್ಗೆ 11ಕ್ಕೆ ರಾಜಭವನ ಮುತ್ತಿಗೆ ಹಾಕಲಿರುವ ಕನ್ನಡಪ ಹೋರಾಟಗಾರರು ಮಾರ್ಚ್ 07 ಕ್ಕೆ ಬೆಳಗಾವಿ ಚಲೋ ನಡೆಸಲಿದ್ದಾರೆ
ಮಾರ್ಚ್ 11 ರಂದು ಮೇಕೆದಾಟಿಗಾಗಿ ಅತ್ತಿಬೆಲೆ ತಮಿಳುನಾಡು ಗಡಿ ಬಂದ್
ಮಾರ್ಚ್ 14 ರಾಮನಗರ ಮಂಡ್ಯ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ
ಮಾರ್ಚ್ 17 ಹೊಸಕೋಟೆ – ಚೆನ್ನೈ ಹೆದ್ದಾರಿ ತಡೆ
ಮಾರ್ಚ್ 18 ಕನ್ನಡಪರ ಸಂಘಟನೆಗಳ ಸಭೆ
ಮಾರ್ಚ್ 22 ರಂದು ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ಕರ್ನಾಟಕ ಬಂದ್ ನಡೆಸಲು ನಿರ್ಧಾರಿಸಲಾಗಿದೆ.
ಮಾರ್ಚ್ 22ರಂದು ಕರೆಯಲಾಗಿರುವ ಬಂದ್ ಗೆ ಕನ್ನಡ ಚಿತ್ರೋದ್ಯಮ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ಘೋಷಿಸಿದೆ ಅಂದು ಬೆಳಗ್ಗೆ ಕನ್ನಡ ಪರ ಹೋರಾಟಗಾರರು ಬೆಂಗಳೂರಿನ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ನಡೆಸಲಿದ್ದಾರೆ ಎಂದು ಪ್ರಕಟಿಸಿದರು.
Previous Articleಬಿಜೆಪಿ -ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುತ್ತಿದ್ದಾರೆ
Next Article ಜಗ್ಗಿ ವಾಸುದೇವ್ ಯಾವ ಪಾರ್ಟಿ ?