ಬೆಂಗಳೂರು,ಜು.5:
ವೇತನ ಆಯೋಗದ ಶಿಫಾರಸುಗಳ ಅನ್ವಯ ಜುಲೈ ತಿಂಗಳಿನಿಂದ ತಮ್ಮ ವೇತನ ಪರಿಷ್ಕರಣೆಯಾಗಲಿದೆ ಎಂದು ಕಾಯುತ್ತಿದ್ದ ರಾಜ್ಯ ಸರ್ಕಾರಿ ನೌಕರರಿಗೆ ನಿರಾಸೆಯಾಗುವ ಸುದ್ದಿ ಹೊರ ಬಿದ್ದಿದೆ.
ರಾಜ್ಯದ ಹಣಕಾಸು ಪರಿಸ್ಥಿತಿ ಸದ್ಯದ ಮಟ್ಟಿಗೆ ಉತ್ತಮವಾಗಿಲ್ಲ ಈ ಹಿನ್ನೆಲೆಯಲ್ಲಿ ವೇತನ ಪರಿಷ್ಕರಣೆ ಆದೇಶ ಜಾರಿಗೆ ತರಲು ಕಷ್ಟವಾಗುತ್ತದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದು ನೌಕರರನ್ನು ಕೇರಳುವಂತೆ ಮಾಡಿದೆ.
ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳ ವರದಿ ಮುಖ್ಯಮಂತ್ರಿಗಳನ್ನು ಸೇರಿದೆ ಎಂಬ ಮಾಹಿತಿಯ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಸದಸ್ಯರು ತುರ್ತು ಸಭೆ ನಡೆಸಿ ಸರ್ಕಾರದ ವಿರುದ್ಧ ಹೋರಾಟದ ಕುರಿತಂತೆ ಚರ್ಚೆ ನಡೆಸಿದರು.
ವೇತನ ಪರಿಷ್ಕರಣೆಗೆ ರಚಿಸಲಾಗಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡದ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರು ಇದೇ ಜುಲೈ 29ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ನಿರ್ಧರಿಸಿದರು.
ಆಯೋಗ ವರದಿ ನೀಡಿ ನಾಲ್ಕು ತಿಂಗಳಾಗುತ್ತಾ ಬಂದರೂ ಆಯೋಗದ ಶಿಫಾರಸುಗಳ ಜಾರಿಗೆ ಸರ್ಕಾರ ಮೀನಮೇಷ ಎಣಿಸುತ್ತಾ ಬಂದಿದೆ. ರಾಜ್ಯದ ಎಲ್ಲ ವೃಂದದ, ಎಲ್ಲ ಇಲಾಖೆಗಳ ನೌಕರರು ಬೇಸರ ವ್ಯಕ್ತಪಡಿಸಿದ್ದು, ಹೋರಾಟ ಆರಂಭಿಸುವಂತೆ ಒಕ್ಕೊರಲಿನ ಒತ್ತಡ ಹಾಕಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಜುಲೈ 7ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.
ಕಾರ್ಯಕಾರಿಣಿ ಸಭೆಯ ನಂತರ ನೌಕರರ ನಿಯೋಗ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ವೇತನ ಆಯೋಗದ ಶಿಫಾರಸು ಜಾರಿಗೆ ಮನವಿ ಸಲ್ಲಿಸಬೇಕು ಸರ್ಕಾರ ತಮ್ಮ ಮನವಿಗೆ ಪುರಸ್ಕಾರ ನೀಡದೆ ಹೋದಲ್ಲಿ ಜುಲೈ 29ರಿಂದ ಮುಷ್ಕರ ನಡೆಸುವ ನಿರ್ಧಾರ ತಿಳಿಸಬೇಕು ಎಂದು ಚರ್ಚಿಸಿರುವುದಾಗಿ ಗೊತ್ತಾಗಿದೆ
Previous Articleಸಿಎಂ ಹುದ್ದೆ ಮೇಲೆ ಕಣ್ಣಿಟ್ಟವರಿಂದ ಮುಡಾ ಅಕ್ರಮ ದಾಖಲೆ ಬಹಿರಂಗ.
Next Article Omeletನಲ್ಲಿ ಕಲ್ಲಿದ್ದರೆ ಏನಾಯ್ತು.?