ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ಬಂದಿಳಿದಾಗ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಟಿವಿ ಕ್ಯಾಮರಾದಲ್ಲಿ ಸೆರೆಹಿಡಿದಕ್ಕಾಗಿ ಪತ್ರಕರ್ತೆಯೊಂದಿಗೆ ಅನುಚಿತವಾಗಿ ನಡೆದುಕೊಂಡರು ಎಂದು ಆಪಾದಿಸಿ ಆಸ್ಟ್ರೇಲಿಯಾ ದೇಶದ ಮೀಡಿಯಾ ಸಂಸ್ಥೆಗಳು ವಿಶ್ವ ವಿಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಯವರನ್ನು ಬೆದರಿಸುವ ಟೊಣಪ ಅಥವಾ ಬುಲೀ ಎಂದು ಕರೆದಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ ಬುಲೀ ಎಂದರೆ ಅಸಹಾಯಕ ವ್ಯಕ್ತಿಗಳನ್ನು ಪೀಡಿಸುವ ಅಥವಾ ತನಗಿಂತ ಸಣ್ಣವರಿಗೆ ತೊಂದರೆ ಕೊಡುವವ ಎಂದರ್ಥ. ಓರ್ವ ಸಣ್ಣ ದೇಹದ ಮಹಿಳಾ ಪತ್ರಕರ್ತೆ ತನ್ನ ಸಹವರ್ತಿ ಕ್ಯಾಮರಾಮೆನ್ ಗಳ ಜೊತೆ ವಿರಾಟ್ ಕೊಹ್ಲಿಯವರ ಚಿತ್ರ ತೆಗೆಯಲು ಮುಂದಾದಾಗ ಕೊಹ್ಲಿಯವರು ತಮ್ಮ ಹಿಂದೆ ಇದ್ದ ತಮ್ಮ ಪತ್ನಿ ಮತ್ತು ಮಕ್ಕಳು ಟಿವಿ ಯವರಿಗೆ ಕಾಣದಂತೆ ಕ್ಯಾಮರಾಕ್ಕೆ ಅಡ್ಡಲಾಗಿ ತಿರುಗಿ ನಿಂತು ‘ನನ್ನ ಚಿತ್ರ ತೆಗೆಯಿರಿ ಆದರೆ ನನ್ನ ಹೆಂಡತಿ ಮಕ್ಕಳದ್ದಲ್ಲ’ ಎಂದು ಹೇಳಿದರು. ಆಸ್ಟ್ರೇಲಿಯಾ ದೇಶದಲ್ಲಿ ಭಾರತದಂತೆ ಪ್ರಭಾವಿ ವ್ಯಕ್ತಿಗಳ ಮಾತನ್ನು ಮೀಡಿಯಾದವರು ಮನ್ನಣೆಮಾಡುವುದಿಲ್ಲ. ಅಲ್ಲಿ ಪ್ರಖ್ಯಾತ ವ್ಯಕ್ತಿಗಳ ಚಿತ್ರಗಳನ್ನು ಅವರ ಅನುಮತಿ ಇಲ್ಲದೆಯೇ ತೆಗೆಯುತ್ತಾರೆ. ಆದ್ದರಿಂದ ಪ್ರಖ್ಯಾತರಾದ ವಿರಾಟ್ ಕೊಹ್ಲಿಯವರು ಅವರು ಇದ್ದಂತೆಯೇ ಅವರನ್ನು ಚಿತ್ರೀಕರಿಸಲು ಚಾನಲ್ನವರು ಮುಂದಾಗಿರುವುದು ಸ್ವಾಭಾವಿಕ. ಓರ್ವ ದೈಹಿಕವಾಗಿ ದುರ್ಬಲಳಾಗಿರುವ ಮಹಿಳಾ ಪತ್ರಕರ್ತೆಯೊಂದಿಗೆ ವಿರಾಟ್ ಓರ್ವ ಬೆದರಿಸುವ ಆಸಾಮಿಯಂತೆ ವರ್ತಿಸಿರುವುದು ಸರಿಯಲ್ಲ ಎಂದು ಆಸ್ಟ್ರೇಲಿಯಾದ ಮೀಡಿಯಾ ಸಂಸ್ಥೆಗಳು ಹೇಳಿವೆ. ತಮ್ಮ ಮೊದಲನೇ ಮಗು ಹುಟ್ಟಿದಾಗಿನಿಂದಲೂ ತಮ್ಮ ಮಕ್ಕಳನ್ನು ಮಾಧ್ಯಮದ ಕ್ಯಾಮರಾದಲ್ಲಿ ಸೆರೆಹಿಡಿಯಬಾರದು ಎಂದು ವಿರಾಟ್ ಕಟ್ಟು ನಿಟ್ಟಾಗಿ ನಿರ್ಬಂಧಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಈಗ ಅವರ ಆ ನಿರ್ಬಂಧ ಅವರಿಗೆ ಅಪಪ್ರಚಾರ ವಾಗುವಂತೆ ಮಾಡಿದೆ ಎಂದು ಹೇಳಲಾಗಿದೆ.