ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಅವರ ತಲೆದಂಡ ಆಗಬಹುದಾ..?ಅವರು ಸಚಿವ ಸ್ಥಾನ ಕಳೆದುಕೊಳ್ಳಬಹುದಾ? ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಬಂಧನವಾಗಬಹುದಾ..?
ಇಂಥಾದ್ದೊಂದು ಚರ್ಚೆ ಇದೀಗ ರಾಜಕೀಯ ವಲಯದಲ್ಲಿ ಆರಂಗೊಂಡಿದೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲೂ ಅಂದಿನ ಗೃಹ ಸಚಿವ ಕೆ. ಜೆ. ಜಾರ್ಜ್ ಅವರ ತಲೆದಂಡವಾಗಿತ್ತು. ಟಿವಿಗಳಿಗೆ ಸಂದರ್ಶನ ನೀಡಿದ್ದ ಗಣಪತಿ, ಬಳಿಕ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅಂದು ಜಾರ್ಜ್ ವಿರುದ್ದ ಹೋರಾಟ ಮಾಡಿದ್ದ ಬಿಜೆಪಿ, ಅವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಕಾಂಗ್ರೆಸ್ ಕೂಡಾ ಬಿಜೆಪಿ ವಿರುದ್ಧ ಸಚಿವ ಈಶ್ವರಪ್ಪ ವಿರುದ್ಧ ಹೋರಾಟ ರೂಪಿಸುತ್ತಿದ್ದು ಬೆಳವಣಿಗೆಗಳು ಕುತೂಹಲ ಮೂಡಿಸಿವೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ,ಈ ಹೋರಾಟ, ವಾದ-ಪ್ರತಿವಾದಗಳೆಲ್ಲಾ ರಾಜಕೀಯ ಪ್ರೇರಿತವಷ್ಟೇ.. ವಾಸ್ತವವಾಗಿ ಈ ಪ್ರಕರಣದಲ್ಲಿ ಸಾವಿಗೂ ಮುನ್ನ ಗುತ್ತಿಗೆದಾರ ಸಂತೋಷ್ ಪಾಟೀಲ್ ವಾಟ್ಸಾಪ್ ನಲ್ಲಿ ಸಂದೇಶವೊಂದನ್ನು ಕಳುಹಿಸಿ ತಮ್ಮ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ತಾನು ಮಾಡಿದ ಕಾಮಗಾರಿ ಗುತ್ತಿಗೆ ಹಣ ನೀಡಲಿಲ್ಲ ಬಿಲ್ ಪಾವತಿ ಮಾಡಲು ಶೇಕಡಾ 40 ರಷ್ಟು ಕಮೀಷನ್ ಕೊಡುವಂತೆ ತಮ್ಮ ಹಿಂಬಾಲಕರ ಮೂಲಕ ಹೇಳಿಸಿದ್ದರು. ಈ ಎಲ್ಲಾ ವಿದ್ಯಮಾನಗಳಿಂದ ಬೇಸರಗೊಂಡು ಸಾವಿಗೆ ಶರಣಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನು ಬಿಟ್ಟರೆ ಬಿಜೆಪಿ ವರಿಷ್ಟರಿಗೆ ಈತ ಬರೆದಿದ್ದ ಪತ್ರ ಹಾಗೂ ಈ ಸಂಬಂಧ ಸಂತೋಷ್ ಪಾಟೀಲ್ ನಡೆಸಿದ ಪತ್ರಿಕಾಗೋಷ್ಟಿ ಬಿಟ್ಟರೆ ಬೇರೆ ಯಾವುದೇ ದಾಖಲೆಗಳಿಲ್ಲ.
ಇನ್ನು ಈತ ನಡೆಸಿದ್ದಾನೆ ಎನ್ನಲಾದ ರಸ್ತೆ, ಒಳಚರಂಡಿ ಮೊದಲಾದ 108 ಕಾಮಗಾರಿಗಳು ಯಾವುವು..? ಇದಕ್ಕೆ ಯಾವಾಗಾ ಯೋಜನಾ ವರದಿ ತಯಾರಾಗಿದೆ…? ಇವುಗಳ ಅಂದಾಜು ವೆಚ್ಚ ಎಷ್ಟು..? ಕಾಮಗಾರಿಗಳಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆಯಾ..? ಕಾಮಗಾರಿಗಳ ಟೆಂಡರ್ ಆಗಿದೆಯಾ…? ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಿದೆಯಾ…? ಈ ಎಲ್ಲಾ ಪ್ರಶ್ನೆಗಳಿಗೆ ಒಂದೇ ಉತ್ತರ ಇಲ್ಲಾ ಎನ್ನುವುದಾಗಿದೆ.
ಹಾಗಾದರೆ ಸಚಿವ ಈಶ್ವರಪ್ಪ ಎನಾದರೂ ಈ ಕಾಮಗಾರಿ ಮಾಡುವಂತೆ ಪತ್ರ ನೀಡಿದ್ದರಾ..? ಅದೂ ಇಲ್ಲ…ಹೋಗಲಿ ಈಶ್ವರಪ್ಪ ಕಚೇರಿಯಲ್ಲಿನ ಯಾವುದಾದರೂ ಸಿಬ್ಬಂದಿ ನೀಡಿದ್ದಾರಾ…? ಅದು ಕೂಡಾ ಇಲ್ಲ.ಹೀಗೆ ಸಚಿವ ಈಶ್ವರಪ್ಪ ಮತ್ತವರ ಆಪ್ತರು ಹೀಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಯಾರೊಬ್ಬರು ಈ ಕಾಮಗಾರಿ ಸಂಬಂಧ ಯಾವುದೇ ಪತ್ರ ವ್ಯವಹಾರ ನಡೆಸಿಲ್ಲ. ಈ ಕುರಿತು ಯಾವುದೇ ಲಿಖಿತ ದಾಖಲೆಗಳಿಲ್ಲ.ಹೀಗಾದರೆ ಆರೋಪ ನಿಲ್ಲುವುದೆಲ್ಲಿ.
ಸಂತೋಷ್ ಪಾಟೀಲ್ ಈ ಹಿಂದೆ ಲಂಚದ ಆರೋಪ ಮಾಡಿದಾಗಲೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸ್ಪಷ್ಟನೆ ನೀಡಿ, ಈ ಕಾಮಗಾರಿಗೂ ಇಲಾಖೆಗೂ ಸಂಬಂಧವಿಲ್ಲ.ಇಲಾಖೆಯಿಂದ ಯಾರಿಗೂ ಈ ರೀತಿಯ ಕಾಮಗಾರಿ ಕೈಗೊಳ್ಳಲು ಸೂಚಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಆದರೆ, ಇದೀಗ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದಕ್ಕೆ ಸಚಿವ ಈಶ್ವರಪ್ಪ ಕಾರಣ ಎಂದು ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿದ್ದಾರೆ.ಇದು ಹಾಗೂ ಹಿಂದಿನ ಘಟನಾವಳಿ ಆಧರಿಸಿ ಮೃತರ ಸೋದರ ನೀಡಿರುವ ದೂರು ಆಧರಿಸಿ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಇವೆಲ್ಲಾ ಕಾನೂನಾತ್ಮಕ ಪ್ರಕ್ರಿಯೆಗಳು. ಆದರೆ ತನಿಖೆ ನಡೆಸುವ ಸಂಸ್ಥೆಗಳು, ನ್ಯಾಯಾಲಯ ಸಾಕ್ಷಿಗಳು, ದಾಖಲೆ ಹಾಗೂ ಪೂರಕ ಅಂಶಗಳನ್ನು ಪರಿಗಣಿಸುತ್ತವೆ. ಆದರೆ ಈ ಪ್ರಕರಣದಲ್ಲಿ ಈ ಹಿಂದೆ ನಡೆದ ಪೊಲೀಸ್ ಅಧಿಕಾರಿ ಗಣಪತಿ ಪ್ರಕರಣದಲ್ಲೂ ಬಹುತೇಕ ಇಂತಹದೆ ಸಾಮ್ಯತೆಯಿತ್ತು.ಅಂದು ಈ ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಕೆ ಮಾಡಿ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಪಡೆದಿದ್ದನ್ನು ಬಿಟ್ಟರೆ ಬೇರೇನೂ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ನಾಯಕ ಕೆ.ಜೆ.ಜಾರ್ಜ್ ವಿರುದ್ಧ ಬಿಜೆಪಿ ಮಾಡಿದ ಯಾವುದೇ ಆರೋಪಗಳು ತನಿಖಾ ಸಂಸ್ಥೆ ಹಾಗು ನ್ಯಾಯಾಲಯದಲ್ಲಿ ಸಾಬೀತಾಗಲಿಲ್ಲ. ರಾಜಕೀಯ ಕಾರಣಕ್ಕಾಗಿ ಆರೋಪಗಳನ್ನೆದುರಿಸಿದ ಕೆ.ಜೆ.ಜಾರ್ಜ್ ಆರೋಪ ಮುಕ್ತರಾಗಿದ್ದು ಇದೀಗ ಇತಿಹಾಸ.
ಈಗ ಬಹುತೇಕ ಇದಕ್ಕೆ ಸಾಮ್ಯತೆಯಿರುವಂತೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣವಿದೆ.
ರಾಜಕೀಯ ಹಾಗೂ ವಾಟ್ಸಾಪ್ ಸಂದೇಶ ಹೊರತು ಪಡಿಸಿ ಯಾವ ದೃಷ್ಟಿಯಿಂದ ನೋಡಿದರೂ ಈ ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ.ಯಾವೊಂದು ದಾಖಲೆಗಳು ಇದಕ್ಕೆ ಪೂರಕವಾಗಿ ಮೇಲ್ನೋಟಕ್ಕೆ ಲಬ್ಯವಿಲ್ಲ.ಹಾಗೆಂದ ಮಾತ್ರಕ್ಕೆ ಇಲ್ಲಿ ಸಚಿವ ಈಶ್ವರಪ್ಪ ತಪ್ಪಿತಸ್ಥರಲ್ಲ ಎಂದು ಹೇಳುತ್ತಿಲ್ಲ.
ಇಲ್ಲೊಂದು ಅಮೂಲ್ಯ ಜೀವ ಪ್ರಾಣ ಕಳೆದುಕೊಂಡಿದೆ.ಇದರಿಂದ ಆತನ ಕುಟುಂಬ ಅನಾಥವಾಗಿದೆ.ಈ ನಷ್ಟವನ್ನು ಮೃತರ ಕುಟುಂಬಕ್ಕೆ ಭರಿಸಲು ಯಾರಿಂದಲೂ ಸಾಧ್ಯವಿಲ್ಲ. ಸಾವಿಗೂ ಮುನ್ನ ಆತ ಅನುಭವಿಸಿದ ಮಾನಸಿಕ, ದೈಹಿಕ ಆರ್ಥಿಕ ಸಂಕಷ್ಟಕ್ಕೆ ಕಾರಣವಾದ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು.ಯಾಕೆಂದರೆ ಮೃತ ಸಂತೋಷ್ ಒಂದು ದಿನ ಆರೋಪ ಮಾಡಿ ಮತ್ತೊಂದು ದಿನ ಮೃತ ಪಟ್ಟಿಲ್ಲ, ತಿಂಗಳ ಕಾಲ ಆರೋಪ ಮಾಡಿದರು.ಈ ಆರೋಪದ ಹಿನ್ನೆಲೆಯಲ್ಲಿ ಈಶ್ವರಪ್ಪ ಕೋರ್ಟ್ ಮೊರೆ ಕೂಡಾ ಹೊಕ್ಕಿದ್ದಾರೆ.
ಒಟ್ಟಾರೆ ಯಾವುದೇ ಯೋಜನೆ,ಅನುಮೋದನೆ, ಟೆಂಡರ್ ಇಲ್ಲದೆ ಕಾಮಗಾರಿ ಮಾಡುವ ವ್ಯವಸ್ಥೆ ಹೇಗೆ ರೂಪಿತವಾಯಿತು.ಇದರ ಹಿಂದಿರುವ ವ್ಯಕ್ತಿಗಳಾರು..ಈಶ್ವರಪ್ಪ ಕಚೇರಿ, ಮನೆಯಲ್ಲಿ ಇಂತಹ ವ್ಯವಸ್ಥೆ ಇದೆಯಾ ಎಂಬೆಲ್ಲಾ ಅಂಶಗಳ ಬಗ್ಗೆ ಅತ್ಯಂತ ಆಳಕ್ಕಿಳಿದು ತನಿಖೆ ಮಾಡಬೇಕು ಕೆಟ್ಟು ಹೋಗಿರುವ ವ್ಯವಸ್ಥೆಗೆ ಮುಲಾಮು ಹಚ್ಚಿ ಸರಿದಾರಿಗೆ ತರಬೇಕಿದೆ.
ಇವೆಲ್ಲಾ ಅಂಶಗಳು ವಾದ-ಪ್ರತಿವಾದಕ್ಕೆ ಅವಕಾಶ ಕಲ್ಪಿಸಲಿವೆ ಇದಕ್ಕಿಂತ ಹೊರತಾಗಿ ನೈತಿಕತೆಯ ಪ್ರಶ್ನೆ ಪ್ರಮುಖವಾಗಲಿದೆ. ಜನ ಸಾಮಾನ್ಯರು ಹೇಳುವುದು ಬಿಜೆಪಿಯೆಂದರೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶಗಳಲ್ಲಿ ನಂಬಿಕೆಯಿಟ್ಟವರು.ಶ್ರೀರಾಮ ಕೇವಲ ಒಂದು ಆರೋಪ ಬಂದ ಮಾತ್ರಕ್ಕೆ ತನ್ನ ಪತ್ನಿಯನ್ನೇ ಕಾಡಿಗೆ ಕಳುಹಿಸಿ ನೈತಿಕತೆಯ ಪಾಠ ಮಾಡಿದ ವ್ಯಕ್ತಿತ್ವ . ಇಂತಹ ವ್ಯಕ್ತಿತ್ವವನ್ನು ಆರಾಧಿಸುವ ಈಶ್ವರಪ್ಪ ನೈತಿಕತೆ ಹಿನ್ನೆಲೆಯಲ್ಲಿ ಮಂತ್ರಿ ಸ್ಥಾನ ತೊರೆಯಬಾರದೇಕೆ ಎನ್ನುವುದು ಪ್ರಮುಖ ಪ್ರಶ್ನೆಯಾಗಿದೆ ಈಗ ಉತ್ತರ ಹೇಳಬೇಕಾದ್ದು ಈಶ್ವರಪ್ಪ ಮಾತ್ರ