ಬೆಂಗಳೂರು: ಮುಖ್ಯಮಂತ್ರಿಗಳ ನಿವಾಸಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಗಮಿಸಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಉಪಹಾರ ಸೇವಿಸಿ, ಪ್ರಸಕ್ತ ರಾಜಕೀಯದ ಕುರಿತು ಚರ್ಚೆ ನಡೆಸಿದರು.
ಬಳಿಕ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ನಾನು ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರೂ ಒಗ್ಗಟ್ಟಾಗಿ ಹೋಗುತ್ತಿದ್ದೇವೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಿದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹಿಂದೆಯೂ ಇರಲಿಲ್ಲ. ಈಗಲೂ ಇಲ್ಲ, ಆದರೆ ಕೆಲವು ಮಾದ್ಯಮಗಳು ಗೊಂದಲವನ್ನು ಸೃಷ್ಟಿಸಿದವು” ಎಂದು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ರಾಜ್ಯದಲ್ಲಿ ಗೊಂದಲವನ್ನು ಸೃಷ್ಟಿ ಮಾಡುತ್ತಿವೆ. ಸುಳ್ಳು ಹೇಳುವುದು ಬಿಜೆಪಿ ಮತ್ತು ಜೆಡಿಎಸ್ ಚಾಳಿ. ಅದನ್ನು ನಮ್ಮ ಸರ್ಕಾರ ಸಮರ್ಥವಾ
ಗಿ ಎದುರಿಸಲಿದೆ. ನಾನು ಮತ್ತು ಡಿ.ಕೆ.ಶಿವಕುಮಾರ್ ಸೇರಿ ವಿಧಾನಸಭಾ ಅಧಿವೇಶನದಲ್ಲಿ ಇವರನ್ನು ಸಮರ್ಥವಾಗಿ ಎದುರಿಸುತ್ತೇವೆ. ಇದಕ್ಕೆ ಬೇಕಾದ ತಂತ್ರಗಾರಿಕೆಯನ್ನು ಮಾಡಿದ್ದೇವೆ ಎಂದು ಹೇಳಿದರು.
ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ನಾವಿಬ್ಬರೂ ಕೇಳುತ್ತೇವೆ.
ಈಗ ಸೃಷ್ಟಿಯಾಗಿರುವ ಗೊಂದಲಗಳನ್ನು ಸರಿಪಡಿಸಿ ಎಂದು ಹೈಕಮಾಂಡ್ ಹೇಳಿದೆ. ನಾವಿಬ್ಬರೂ ಸೇರಿ ಈ ಗೊಂದಲಗಳನ್ನು ಸರಿಪಡಿಸುತ್ತೇವೆ. ಇನ್ಮುಂದೆ ಯಾವುದೇ ಗೊಂದಲ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಲವು ಶಾಸಕರು ದೆಹಲಿಗೆ ಹೋಗಿದ್ದರು. ನಾನು ಸಂಪುಟ ಪುನರ್ ರಚನೆ ಮಾಡುತ್ತೇನೆ ಎಂದು ಹೇಳಿದ್ದೆ. ಅದಕ್ಕಾಗಿ ನಮ್ಮನ್ನು ಮಂತ್ರಿ ಮಾಡಿ ಎಂದು ದೆಹಲಿಗೆ ಹೋಗಿರಬಹುದು. ಹಾಗೆಂದು ಇದು ನಾಯಕತ್ವದ ವಿರುದ್ಧ ಎಂದಲ್ಲ. ಕೆಲವರು ಬಂದು ನನ್ನ ಜೊತೆ ಮಾತನಾಡಿದ್ದಾರೆ. ನಾವು ದೆಹಲಿಗೆ ಹೋಗಿದ್ದೇವೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಹೈಕಮಾಂಡ್ ಏನು ತೀರ್ಮಾನ ಕೊಡುತ್ತದೆ, ಏನು ನಿರ್ದೇಶನ ಕೊಡುತ್ತದೆ, ಏನು ಸೂಚನೆ ಕೊಡುತ್ತದೆ. ಅದರಂತೆ ನಡೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೇವೆ. ಜನರಿಗೆ ಕೊಟ್ಟಿರುವ ಮಾತಿನಂತೆ ನಡೆದುಕೊಂಡು ಜನರ ಸೇವೆ ಮಾಡುತ್ತಿದ್ದೇವೆ. ರಾಜ್ಯದ ಜನತೆ ನಮ್ಮ ಮೇಲೆ ಅಪಾರವಾದ ವಿಶ್ವಾಸ, ನಂಬಿಕೆಯನ್ನು ಇಟ್ಟಿದೆ. ನಮಗೆ ಸಹಕಾರವನ್ನು ಕೊಟ್ಟುಕೊಂಡು ಬರುತ್ತಿದ್ದಾರೆ. ಅವರ ಆಸೆ ಆಕಾಂಕ್ಷೆ, ಆಶೋತ್ತರಗಳನ್ನು ಈಡೇರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದೆ. ಹಿಂದೆ ಹೈಕಮಾಂಡ್ ಏನು ತೀರ್ಮಾನ ಮಾಡಿದೆ ಅದರ ಪ್ರಕಾರ ನಾವು ಕೆಲಸವನ್ನು ಮಾಡಿಕೊಂಡು ಹೋಗುತ್ತೇವೆ ಎಂದರು.
ಡಿ.8ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅಲ್ಲಿಯೂ ಕೂಡ ನಾವು ಪ್ರತಿತಂತ್ರವನ್ನು ಹೇಗೆ ಮಾಡಬೇಕೆಂಬ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಪ್ರತಿಪಕ್ಷಗಳನ್ನು ಎದುರಿಸಲು ಪ್ರತಿತಂತ್ರ ಹೆಣೆದಿದ್ದೇವೆ. ರಾಜಕೀಯವಾಗಿ ನಾವಿಬ್ಬರೂ ಕೂಡ ಒಂದೇ ತೀರ್ಮಾನವನ್ನು ಮಾಡಿದ್ದೇವೆ. ಪಕ್ಷದ ವರಿಷ್ಟರು ಏನು ಹೇಳಿದ್ದಾರೆ ಆ ರೀತಿ ಕೆಲಸ ಮಾಡಿಕೊಂಡು ಹೋಗಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ನಮ್ಮಲ್ಲಿ ಯಾವ ಗುಂಪು ಸಹ ಇಲ್ಲ. ಯಾವ ಗುಂಪು ಕಟ್ಟಲು ಅವಕಾಶ ಕೊಡುವುದಿಲ್ಲ. ನಮ್ಮದು ಒಂದೇ ಒಂದು ಗುಂಪು ಅದು ಕಾಂಗ್ರೆಸ್ ಗುಂಪು. ಪ್ರತಿಯೊಬ್ಬರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದು ನಮ್ಮ ಕರ್ತವ್ಯ. ಪ್ರತಿಯೊಬ್ಬ ಶಾಸಕರನ್ನು ಹೇಗೆ ಶಕ್ತಿಶಾಲಿಯಾಗಿ ಬೆಳೆಸಬೇಕೋ ಅದರಂತೆ ಕ್ರಮ ವಹಿಸುತ್ತೇವೆ. ಪಕ್ಷವನ್ನು ಬಲಿಷ್ಟವಾಗಿ ಕಟ್ಟುತ್ತೇವೆ. 2028ಕ್ಕೆ ನಾವೇ ಪುನಃ ಅಧಿಕಾರಕ್ಕೆ ಬರುತ್ತೇವೆ. ಇದಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಮುಖ್ಯಮಂತ್ರಿಗಳು ಏನು ಹೇಳಿದ್ದಾರೆ. ಅದಕ್ಕೆ ನಾನು ಕೂಡ ಸಾಥ್ ನೀಡುತ್ತೇನೆ ಎಂದು ಹೇಳಿದರು.

