ಬೆಂಗಳೂರು,ಮೇ.7-ವೇಗವಾಗಿ ಹೋಗುತ್ತಿದ್ದ ಕೆ ಎಸ್ಆರ್ ಟಿಸಿ ಬಸ್ ಇನ್ನೋವಾ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಗು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡ ದಾರುಣ ಘಟನೆ ಇಂದು ಬೆಳಿಗ್ಗೆ ಕನಕಪುರ ತಾಲೂಕಿನ ಕೆಮ್ಮಾಳೆ ಗೇಟ್ ಬಳಿ ನಡೆದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರದ ಇನ್ನೋವಾ ಕಾರು ಚಾಲಕ ಉಮೇಶ್(24), ಅಕ್ಷತಾ(28),ಆಕೆಯ ಆರು ತಿಂಗಳ ಮಗ ಸುಮಂತ್ ಮೃತಪಟ್ಟವರು. ಮೃತ ಅಕ್ಷತಾ ಪತಿ ಸುರೇಂದ್ರ ಹಾಗು ನವನೀತ್ ಗಂಭೀರ ಗಾಯವಾಗಿದೆ. ಕನಕಪುರದ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸುರೇಂದ್ರ ಅವರು ಇನೋವಾ ಕಾರಿನಲ್ಲಿ ತಡ ರಾತ್ರಿ ಉಡುಪಿ ಜಿಲ್ಲೆಯಿಂದ ಕನಕಪುರಕ್ಕೆ ಹೊರಟಿದ್ದಾರೆ.
ಮಾರ್ಗ ಮಧ್ಯದಲ್ಲಿ ಬೆಳಿಗ್ಗೆ 6.45ರ ವೇಳೆ ಹಲಗೂರು ಕಡೆಯಿಂದ ಸಾತನೂರು ಕಡೆಗೆ ಬರುತ್ತಿದ್ದಾಗ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಕಾರಿನ ಚಾಲಕ ನಿದ್ದೆಯ ಮಂಪರಿನಲ್ಲಿ ವಾಹನವನ್ನು ಚಲಾಯಿಸಿ ಅಪಘಾತಕ್ಕೆ ಕಾರಣವಾಗಿದ್ದಾನೆ ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿರುವ ಸಾತನೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.