ಬೆಂಗಳೂರು.
ಅಧಿಕಾರಿಗಳು ಮತ್ತು ರಾಜಕೀಯ ವಿರೋಧಿಗಳನ್ನು ಮಣಿಸಲು ಬಿಜೆಪಿ ಶಾಸಕ ಮುನಿರತ್ನ ಹೆಣೆದಿದ್ದ ಹನಿಟ್ರ್ಯಾಪ್ ಮತ್ತು ಏಡ್ಸ್ ಇಂಜೆಕ್ಷನ್ ಚುಚ್ಚುವ ಜಾಲಕ್ಕೆ ಪೋಲೀಸ್ ಅಧಿಕಾರಿಯೊಬ್ಬ ಬೆಂಗಾವಲಾಗಿ ನಿಂತ ಸಂಗತಿ ಬೆಳಕಿಗೆ ಬಂದಿದೆ.
ಮುನಿರತ್ನ ವಿರುದ್ಧ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಈ ಬಗ್ಗೆ ಖಚಿತ ಮಾಹಿತಿಯನ್ನು ಸಂಗ್ರಹಿಸಿ Bengaluru ಗ್ರಾಮಾಂತರ ಜಿಲ್ಲೆ ಹೆಬ್ಬಗೋಡಿ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ಬಂಧಿಸಿದ್ದಾರೆ.
ರಾಜ್ಯ ಬಿಜೆಪಿ ಹಿರಿಯ ಮುಖಂಡ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರಿಗೆ ಏಡ್ಸ್ ಸೋಂಕು ಹಬ್ಬಿಸಲು ಚುಚ್ಚು ಮದ್ದು ನೀಡುವ ಸಂಚನ್ನು ಆರೋಪಿಗಳು ರೂಪಿಸಿದ್ದರು. ಈ ಸಂಚಿನಲ್ಲಿ ಇನ್‌ಸ್ಪೆಕ್ಟರ್ ಅಯ್ಯಣ್ಣ ಪ್ರಮುಖ ಪಾತ್ರವಹಿಸಿದ್ದ ಸಂಗತಿ ಗೊತ್ತಾಯಿತು. ಹಾಗೆಯೇ ವಿಚಾರಣೆ ವೇಳೆ ದೂರುದಾರರು ಹಾಗೂ ಕೆಲ ಸಾಕ್ಷಿದಾರರು ಕೂಡ ಅಯ್ಯಣ್ಣ ಕುರಿತು ಮಾಹಿತಿ ನೀಡಿದ್ದರು. ಅಂತೆಯೇ ಐಪಿಸಿ 120ಬಿ (ಅಪರಾಧಿ ಸಂಚು) ಆರೋಪದಡಿ ಐಯ್ಯಣ್ಣರವನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಸಕ ಮುನಿರತ್ನ ಅವರ ಆಪ್ತ ವಲಯದಲ್ಲಿ ಇನ್‌ಸ್ಪೆಕ್ಟರ್ ಅಯ್ಯಣ್ಣ ಗುರುತಿಸಿಕೊಂಡಿದ್ದರು. ಹೀಗಾಗಿಯೇ ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿ, ರಾಜಗೋಪಾಲ ನಗರ ಹಾಗೂ ಪೀಣ್ಯ ಠಾಣೆಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಅಲ್ಲದೆ ಮುನಿರತ್ನ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕೋಲಾರ ಗ್ರಾಮಾಂತರ ವೃತ್ತ ಪಿಐಗೆ ಅಯ್ಯಣ್ಣ ಕೆಲಸ ಮಾಡಿದ್ದರು. ಹಾಗೆಯೇ ಮುನಿರತ್ನ ಶಿಫಾರಸಿನ ಮೇರೆಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದರು.
Previous Articleರೀಲ್ಸ್ ಗಾಗಿ ವಿದ್ಯಾರ್ಥಿಗಳ ಹುಚ್ಚಾಟ.
Next Article ಹೊರಟ್ಟಿ ಅವರನ್ನು ಹೊಡೆಯಲು ಹೋಗಿದ್ರಾ ಜಮೀರ್..?