ನೆನೆಗುದಿಗೆ ಬಿದ್ದಿರುವ ರಾಜ್ಯ ಮಂತ್ರಿ ಮಂಡಲ ಪುನಾರಚನೆ ಅಥವಾ ವಿಸ್ತರಣೆಗೆ ಸತತ ಪ್ರಯತ್ನ ನಡೆಸುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ ಈ ವಿಷಯವಾಗಿ ಮತ್ತೊಮ್ಮೆ ಹೈಕಮಾಂಡ್ ಕದ ತಟ್ಟಲು ತೀರ್ಮಾನಿಸಿದ್ದಾರೆ. ಮಾಸಾಂತ್ಯಕ್ಕೆ ದೆಹಲಿಗೆ ತೆರಳುತ್ತಿರುವ ಅವರು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ,ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಹಿರಿಯ ನಾಯಕ ಭೂಪೇಂದ್ರ ಸಿಂಗ್ ಯಾದವ್ ಭೇಟಿಗೆ ಸಿದ್ದತೆ ನಡೆಸಿದ್ದಾರೆ.
ಏಪ್ರಿಲ್ 29ರಂದು ದೆಹಲಿಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಭೆ ನಡೆಯಲಿದೆ. ಇದರಲ್ಲಿ ಬೊಮ್ಮಾಯಿ ಅವರು ಕೂಡ ಭಾಗಿಯಾಗಲಿದ್ದಾರೆ. ಈ ವೇಳೆ ಈ ಎಲ್ಲಾ ನಾಯಕರನ್ನು ಸಹ ಭೇಟಿಯಾಗಿ ಮಾತುಕತೆ ನಡೆಸಲು ಸಮಯ ಕೋರಿದ್ದಾರೆ.
ಈ ವೇಳೆ ಸಂಪುಟದಲ್ಲಿ ಖಾಲಿ ಉಳಿದಿರುವ ಐದು ಸ್ಥಾನಗಳ ಜೊತೆಗೆ ಹಾಲಿ ಸಂಪುಟದಲ್ಲಿರುವ ಕೆಲವು ಹಿರಿಯರನ್ನು ಕೈಬಿಟ್ಟು ಪಕ್ಷ ನಿಷ್ಠೆ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವವರನ್ನು ಕುರಿತು ಚರ್ಚೆ ನಡೆಸಲಿದ್ದಾರೆಂದು ಗೊತ್ತಾಗಿದೆ.
ಕಳೆದ ಹಲವು ತಿಂಗಳಿನಿಂದ ಹಲವಾರು ಶಾಸಕರು ಸಂಪುಟ ಪುನಾರಚನೆಯಾಗಬೇಕೆಂದು ಒತ್ತಡ ಹಾಕಿದ್ದರು. ಪದೇ ಪದೇ ಅಧಿಕಾರವನ್ನು ಅನುಭವಿಸಿರುವವರಿಗೆ ಕೋಕ್ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರಾದೇಶಿಕತೆ, ಹಿರಿತನ, ಜಾತಿ ಆಧಾರವಾಗಿಟ್ಟುಕೊಂಡು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ಕೆಲವರು ಆಗ್ರಹಿಸುತ್ತಿದ್ದು ಇದನ್ನು ವರಿಷ್ಟರ ಗಮನಕ್ಕೆ ತರಲಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಯಿಂದ ಸಂಪುಟ ಸರ್ಜರಿ ಅನಿವಾರ್ಯ ಎಂಬುದನ್ನು ವರಿಷ್ಟರಿಗೆ ಮನವರಿಕೆ ಮಾಡಿಕೊಟ್ಟು ಅದಕ್ಕೆ ಹಸಿರು ನಿಶಾನೆ ಪಡೆಯಲಿದ್ದಾರೆಂದು ಗೊತ್ತಾಗಿದೆ.
Previous Articleಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ..!
Next Article ಯಾರೇ ಇರಲಿ ಸುಮ್ಮನೆ ಬಿಡುವುದಿಲ್ಲ