ದೆಹಲಿ : ಎರಡನೆ ಬಾರಿ ಅಧಿಕಾರ ಹಿಡಿದು ಜನ ಮೆಚ್ಚುಗೆಗಳಿಸಿರುವ ಆಮ್ ಆದ್ಮಿ ಪಾರ್ಟಿ ಇದೀಗ ಪಂಜಾಬ್ ಗೆಲುವಿನ ನಂತರ ಇತರೆ ರಾಜ್ಯಗಳತ್ತ ಗಮನ ಹರಿಸಿದೆ.
ಪಕ್ಷದ ಪ್ರಮುಖ ನಾಯಕ ಅರವಿಂದ್ ಕೇಜ್ರಿವಾಲ್ ವರ್ಷಾಂತ್ಯಕ್ಕೆ ಚುನಾವಣೆ ನಡೆಯಲಿರುವ ಗುಜರಾತ್ ನತ್ತ ಹೆಚ್ಚಿನ ಗಮನ ಹರಿಸಿದ್ದಾರೆ. ಇದರ ಜೊತೆಗೆ ರಾಜ್ಯದಲ್ಲೂ ಆಮ್ ಆದ್ಮಿ ಪಕ್ಷಕ್ಕೆ ರಾಜಕೀಯ ಅಸ್ತಿತ್ವಕ್ಕೆ ಅಡಿಪಾಯ ಹಾಕಲು ಮುಂದಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಾಂಗ್ರೆಸ್, ಬಿಜೆಪಿ ಹಾಗು ಜೆಡಿಎಸ್‌ನ ಪ್ರಮುಖ ನಾಯಕರನ್ನು ಸಂಪರ್ಕ ಮಾಡಿದ್ದಾರೆ.
ಈಗಾಗಲೆ ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ ಆಪ್ ಕಚೇರಿ ಆರಂಭಗೊಂಡಿದ್ದು ಬಿಬಿಎಂಪಿ ಚುನಾವಣೆಗೆ ಭರದ ಸಿದ್ದತೆ ನಡೆಸಿದೆ.ಸರ್ಕಾರದ ವೈಪಲ್ಯಗಳು, ಹಾಗು ನಾಗರೀಕ ಸಮಸ್ಯೆಗಳ ವಿರುದ್ದ ಸರಣಿ ಹೋರಾಟ ನಡೆಸುತ್ತಿದ್ದು, ಜನರ ಗಮನ ಸೆಳೆದಿದೆ.ಆದರೆ ಇದನ್ನು ಪಕ್ಷದ ಪರ ಅಭಿಪ್ರಾಯವಾಗಿ ಪರಿವರ್ತಿಸಲು ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ.
ಇಂತಹ ನಾಯಕತ್ವಕ್ಕಾಗಿ ಹುಡುಕಾಟ ನಡೆಸಿರುವ ಅರವಿಂದ ಕೇಜ್ರಿವಾಲ್ ರಾಜ್ಯ ರಾಜಕಾರಣದಲ್ಲಿ ಉತ್ತಮ ಹಿನ್ನೆಲೆ ಹಾಗು ಸಾರ್ವಜನಿಕವಾಗಿ ಒಳ್ಳೆಯ ವರ್ಚಸ್ಸು ಮತ್ತು ಹೆಸರು ಇಟ್ಟುಕೊಂಡಿರುವ 50 ರಿಂದ 75 ನಾಯಕರ ಪಟ್ಟಿ ಮಾಡಿಕೊಂಡು ಅವರ ಜತೆ ಸಂಪರ್ಕದಲ್ಲಿದ್ದಾರೆ.
ಕೇಜ್ರಿವಾಲ್ ಬೆಂಗಳೂರು ಭೇಟಿಯ ವೇಳೆ ದೂರವಾಣಿ ಮೂಲಕ ಕೆಲವು ನಾಯಕರ ಜತೆ ಸಮಾಲೋಚನೆ ಸಹ ನಡೆಸಿದ್ದಾರೆ.
ಈ ಮಧ್ಯೆ, ಕೇಜ್ರಿವಾಲ್ ಅವರನ್ನು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಸಹ ಸಂಪರ್ಕಿಸಿ ಸ್ವಯಂ ನಿವೃತ್ತಿ ಪಡೆದು ಆಮ್ ಆದ್ಮಿ ಪಕ್ಷಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಮೊದಲು ಕಾಂಗ್ರೆಸ್‌ನತ್ತ ಮುಖ ಮಾಡಿದ್ದ ನಾಯಕರು ಪಂಚರಾಜ್ಯಗಳ ಚುನಾವಣೆ ನಂತರ ಇದೀಗ ಆಮ್ ಆದ್ಮಿ ಪಕ್ಷದತ್ತ ಒಲವು ಹೊಂದಿದ್ದಾರೆಂದು ಹೇಳಲಾಗಿದೆ.
ಈಗಾಗಲೇ ಕಾಂಗ್ರೆಸ್‌ನ ಎಸ್.ಆರ್.ಪಾಟೀಲ್, ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಸೇರಿ ಹಲವು ನಾಯಕರ ಜತೆ ಆಪ್ ಮುಖಂಡರು ಮಾತನಾಡಿದ್ದು ಕೇಜ್ರಿವಾಲ್ ಸಹ ಅವರ ಜತೆ ಚರ್ಚಿಸಿದ್ದಾರೆಂದು ಹೇಳಲಾಗಿದೆ. ಕಾಂಗ್ರೆಸ್‌ನ ಬಿ.ಆರ್.ಪಾಟೀಲ್, ಜೆಡಿಎಸ್ ನ ವೈಎಸ್‌ವಿ ದತ್ತಾ, ಶಿವಲಿಂಗೇಗೌಡ. ಬಿಜೆಪಿಯ ಎಚ್ .ಸಿ.ವಿಜಯಶಂಕರ್ ಅವರನ್ನು ಸೆಳೆಯುವ ಬಗ್ಗೆಯೂ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ.
ಆಮ್ ಆದ್ಮಿ ಪಕ್ಷದ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲೂ ಕುತೂಹಲವಿದ್ದು ರಾಜ್ಯದಲ್ಲಿ ಆ ಪಕ್ಷಕ್ಕೆ ಯಾವ ರೀತಿಯಲ್ಲಿ ಸ್ಪಂದನೆ ದೊರೆಯಬಹುದು, ಅದರಿಂದ ನಮಗಾಗಬಹುದಾದ ಲಾಭ-ನಷ್ಟ ಏನು ಎಂಬ ಬಗ್ಗೆಯೂ ಮೂರೂ ಪಕ್ಷಗಳು ತಲೆಕೆಡಿಸಿಕೊಂಡಿವೆ.