ಬೆಂಗಳೂರು,ಜು.31- ಸಾಮಾಜಿಕ ಜಾಲತಾಣಗಳಲ್ಲಿ ಅಲ್‌ಖೈದಾ ಪರ ಪ್ರಚಾರ ಹಾಗೂ ಉಗ್ರರ ಸಂಘಟನೆಗಳ ಮುಖಂಡರ ಪ್ರಚೋದನಕಾರಿ ಭಾಷಣಗಳನ್ನು ಹಂಚಿಕೊಂಡು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್)ಅಧಿಕಾರಿಗಳಿಗೆ ನಗರದಲ್ಲಿ ಸಿಕ್ಕಿಬಿದ್ದಿರುವ ಜಾರ್ಖಂಡ್‌ನ ಶಮಾ ಪರ್ವೀನ್ 10 ಸಾವಿರಕ್ಕೂ ಹಿಂಬಾಲಕರನ್ನು ಹೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರ್‌ಟಿ ನಗರದಲ್ಲಿ ತಾಯಿ, ಸಹೋದರರ ಜೊತೆ ವಾಸವಿದ್ದ ಶಮಾ ಪರ್ವೀನ್ ಆನ್ ಲೈನ್ ಮೂಲಕ ಜಿಹಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದಳು. ಪ್ರಚೋದನಾಕಾರಿ ಸಂದೇಶಗಳನ್ನು ಹಂಚುತ್ತಿದ್ದಳು ಎನ್ನುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ.
ಆರೋಪಿ ಶಮಾ ಪರ್ವೀನ್ ಅನ್ಸಾರಿ ಭಾರತ ಸರ್ಕಾರದ ವಿರುದ್ಧ ‘ಸಶಸ್ತ್ರ ಕ್ರಾಂತಿ ಅಥವಾ ಜಿಹಾದ್’ಗೆ ಕರೆ ನೀಡುವ ವಿಷಯವನ್ನು ಪ್ರಸಾರ ಮಾಡಲು ಡಿಜಿಟಲ್ ವೇದಿಕೆಗಳನ್ನು ಬಳಸುತ್ತಿದ್ದಳು. ಆಕೆಯ ಚಟುವಟಿಕೆಗಳು ಕೇವಲ ಸೈದ್ಧಾಂತಿಕ ಪ್ರಚಾರಕ್ಕಷ್ಟೇ ಸೀಮಿತವಾಗಿರಲಿಲ್ಲ. ಧಾರ್ಮಿಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಪ್ರಚೋದನಕಾರಿ ಸಂದೇಶಗಳನ್ನು ಹರಡಲು ಆಕೆ ಸಾಮಾಜಿಕ ಮಾಧ್ಯಮವನ್ನು ಸಕ್ರಿಯವಾಗಿ ಬಳಸುತ್ತಿದ್ದಳು ಎಂದು ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ.
ಶಮಾ ಪರ್ವೀನ್ ಅನ್ಸಾರಿ ಎರಡು ಫೇಸ್‌ಬುಕ್ ಪುಟಗಳನ್ನು ಹೊಂದಿ ಇನ್‌ಸ್ಟಾಗ್ರಾಮ್ ಖಾತೆಯೊಂದನ್ನು ನಿರ್ವಹಿಸುತ್ತಿದ್ದಳು.
ಇವುಗಳಿಂದ 10 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಳು. ಈ ವೇದಿಕೆಗಳ ಮೂಲಕ, ಅಲ್ ಕೈದಾ ಮತ್ತು ಇತರ ಮೂಲಭೂತವಾದಿ ಪ್ರಚಾರಕರಿಗೆ ಸಂಬಂಧಿಸಿದ ವಿಷಯವನ್ನು ಹಂಚಿಕೊಂಡಿದ್ದಳು.
ಎಕ್ಯೂಐಎಸ್ (ಅಲ್ ಕೈದಾ ಇಂಡಿಯನ್ ಸಬ್ ಕಂಟಿನೆಂಟ್) ನಾಯಕಿ ಮೌಲಾನಾ ಅಸಿಮ್ ಉಮರ್, ಹತ್ಯೆಗೀಡಾದ ಅಲ್-ಕೈದಾ ಉಗ್ರ ಅನ್ವರ್ ಅಲ್-ಅವ್ಹಾಕಿ ಮತ್ತು ಲಾಹೋರ್‌ನ ಲಾಲ್ ಮಸೀದಿಯ ಮೌಲಾನಾ ಅಬ್ದುಲ್ ಅಜೀಜ್ ಭಾಷಣಗಳು ಮತ್ತು ವೀಡಿಯೊಗಳನ್ನು ಪರ್ವೀನ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಳು. ಘಜ್ವಾ-ಎ-ಹಿಂದ್‌ನಂತಹ ವಿಷಯಗಳನ್ನು ಪ್ರಚಾರ ಮಾಡಿದ್ದಳು. ‘ಕಾಫಿರ್’ಗಳ ಮೇಲೆ ದಾಳಿಗೆ ಕರೆ ನೀಡಿ ಮತ್ತು ಭಾರತ ಸರ್ಕಾರವನ್ನು ಉರುಳಿಸಲು ಪ್ರತಿಪಾದಿಸಿದ ಸಂದೇಶಗಳನ್ನೂ ಹಂಚಿಕೊಂಡಿದ್ದಳು.
ಶಮಾ ಪರ್ವೀನ್ ಅನ್ಸಾರಿ ಪಾಕಿಸ್ತಾನಿ ಸಂಸ್ಥೆಗಳೊಂದಿಗೆ ಫೋನ್ ಮತ್ತು ಇಮೇಲ್ ಮೂಲಕ ನಿರಂತರ ಸಂಪರ್ಕದಲ್ಲಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಜುಲೈ ಆರಂಭದಲ್ಲಿ ಎಟಿಎಸ್ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯ ಸಂದರ್ಭದಲ್ಲಿ ಈಕೆಯ ಸಂಚುಗಳ ಬಗ್ಗೆ ತಿಳಿದುಬಂದಿತ್ತು.
ಗುಜರಾತ್ ಎಟಿಎಸ್ ಜುಲೈ 23 ರಂದು ದೆಹಲಿ, ನೋಯ್ಡಾ, ಅಹಮದಾಬಾದ್ ಮತ್ತು ಮೋಡಸಾದ ನಾಲ್ವರನ್ನು ಎಕ್ಯೂಐಎಸ್ ಪರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮೂಲಭೂತವಾದಿ ಮತ್ತು ಜಿಹಾದಿ ಪ್ರಚಾರದ ವೀಡಿಯೊಗಳನ್ನು ಹಂಚಿಕೊಂಡ ಆರೋಪದ ಮೇಲೆ ಬಂಧಿಸಿತ್ತು. ಈ ವೀಡಿಯೊಗಳು ಭಾರತೀಯ ಮುಸ್ಲಿಂ ಯುವಕರನ್ನು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಿರಸ್ಕರಿಸಲು ಮತ್ತು ಸಶಸ್ತ್ರ ದಂಗೆಯ ಮೂಲಕ ಷರಿಯಾ (ಇಸ್ಲಾಮಿಕ್ ಕಾನೂನು) ಹೇರಲು ಪ್ರಚೋದಿಸುವ ಗುರಿಯನ್ನು ಹೊಂದಿವೆ ಎಂದು ಎಟಿಎಸ್ ಹೇಳಿದೆ.
Previous Articleಧರ್ಮಸ್ಥಳದಲ್ಲಿ ಎರಡು ಅಸ್ತಿ ಪಂಜರ ಪತ್ತೆ !
Next Article ಬೆಂಗಳೂರಿನಲ್ಲಿ ಅಡಗಿದ್ದ ಆಲ್ ಖೈದಾ ನಾಯಕಿ