ಬೆಂಗಳೂರು,ಆ.24:
ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಗಳು ನಡೆದಿದ್ದು ಇದರ ವಿರುದ್ಧ ಬಹಿರಂಗ ಸಮರಕ್ಕೆ ಅಹಿಂದ ಒಕ್ಕೂಟ ಮುಂದಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪದ ಬೆನ್ನೆಲ್ಲೇ ಮತ್ತಷ್ಟು ಭ್ರಷ್ಟಾಚಾರ ಆರೋಪ ಪ್ರಕರಣಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು ತಂತ್ರ ರೂಪಿಸಲಾಗಿದೆ ಎಂದು ಅಹಿಂದ ನಾಯಕರು ಆಪಾದಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಸೇರಿದಂತೆ ಹಲವು ಮೂಲಗಳಿಂದ ಈ ಬಗ್ಗೆ ಮಾಹಿತಿ ಪಡೆದಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇದೀಗ ಅಹಿಂದ ಸಂಘಟನೆ ಪುನಶ್ಚೇತನಕ್ಕೆ ಮುಂದಾಗಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿರುವ ಅನುಮತಿ ಕುರಿತು ಆಗಸ್ಟ್ 29 ರಂದು ಹೈಕೋರ್ಟ್ ತೀರ್ಪು ಹೊರಬೀಳಲಿದೆ. ಅದಕ್ಕೂ ಮುನ್ನವೇ ಬೃಹತ್ ಶಕ್ತಿ ಪ್ರದರ್ಶನದ ಮೂಲಕ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಲು ಅಹಿಂದ ಸಂಘಟನೆ ಸಿದ್ಧತೆ ನಡೆಸಿದೆ.
ಸಚಿವ ಜಾರಕಿಹೊಳಿ ನಿವಾಸದಲ್ಲಿ ಸಭೆ ಸೇರಿದ ಅಹಿಂದ ಸಮುದಾಯದ ಮುಖಂಡರು ಆಗಸ್ಟ್ 27ರಂದು ಬೆಂಗಳೂರಿನಲ್ಲಿ ಬೃಹತ್ ರಾಜಭವನ ಚಲೋ ಮೂಲಕ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಲು ಮುಂದಾಗಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಲಿರುವ ಸುಮಾರು ಎರಡು ಲಕ್ಷ ಮಂದಿ ಅಹಿಂದ ಕಾರ್ಯಕರ್ತರು ರೈಲ್ವೆ ನಿಲ್ದಾಣದಿಂದ ರಾಜಭವನದ ವರೆಗೆ ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿದ್ದು ಅಂದು ಇಡೀ ದಿನ ಬೆಂಗಳೂರಿನಲ್ಲಿ ರಸ್ತೆ ಸಂಚಾರ ಆಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.