ಗದಗ: ನಾನು ಮತ್ತೆ ಈ ಬಾರಿಯೂ ಗೆಲ್ತಿನಿ. ಹೋದ ಚುನಾವಣೆಯಲ್ಲಿ 30ಸಾವಿರ ಲೀಡ್ ನಿಂದ ಗೆದ್ದ ನಾನು ಈ ಬಾರಿ 60 ಸಾವಿರ ಲೀಡ್ ನಿಂದ ಗೆಲ್ತಿನಿ. ಇದು ನಾನು ಹೇಳೋದಲ್ಲ. ಇಂಟಲಿಜೆನ್ಸಿ ಅವರೇ ಹೇಳಿ ಹೋಗಿದ್ದಾರೆ. ಹೀಗಂತ ಹೇಳುವ ಮೂಲಕ ಗದಗ ಜಿಲ್ಲೆಯ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.
ಅರೇ…!, ಇದೇನಪ್ಪ ಇಂಟಲಿಜೆನ್ಸಿ ಅಂದ್ರೆ ಗುಪ್ತಚರ ಅಂತ ಅರ್ಥ. ಹಾಗಾದ್ರೆ ಗುಪ್ತವಾಗಿರಬೇಕಿದ್ದ ಸಂಗತಿ ಶಾಸಕ ರಾಮಣ್ಣ ಅವರಿಗೆ ಹೇಳಿದವರು ಯಾರು? ಶಾಸಕರಿಗೆ 60,000 ಲೀಡ್ ನಿಂದ ಗೆಲ್ತಿರಿ ಅಂತ ಹೇಳಿದ್ದು ಗೃಹ ಇಲಾಖೆಯ ಇಂಟಲಿಜೆನ್ಸಿಯಾ? ಅಥವಾ ಪಕ್ಷದ ಇಂಟಲಿಜೆನ್ಸಿನಾ? ಇಲ್ಲವೇ ಶಾಸಕ ರಾಮಣ್ಣ ಲಮಾಣಿ ಅವರೇ ಸ್ವತ: ಖಾಸಗಿಯಾಗಿ ಇಂಟಲಿಜೆನ್ಸಿ ರಿಪೋರ್ಟ್ ತರಿಸಿಕೊಂಡಿದ್ದಾರಾ? ಈ ಮೂರರಲ್ಲಿ ಕೊನೆಯದು ಅಂದರೆ ಶಾಸಕ ರಾಮಣ್ಣ ಲಮಾಣಿ ಅವರು ಖಾಸಗಿಯಾಗಿ ಸರ್ವೆ ಮಾಡಿಸಿದ್ದರೆ ಅಭ್ಯಂತರವಿಲ್ಲ. ಆದರೆ ಒಂದು ವೇಳೆ ಗೃಹ ಇಲಾಖೆ ಇಂಟಲಿಜೆನ್ಸಿಯವರು ರಾಮಣ್ಣ ಲಮಾಣಿ ಅವರಿಗೆ 60 ಸಾವಿರ ಲೀಡ್ ಬಗ್ಗೆ ಹೇಳಿದ್ರೆ, ಇದು ಮಾಹಿತಿ ಸೋರಿಕೆಯಲ್ಲವೆ? ಹಾಗಾದ್ರೆ ಇವರಿಗೆ ಈ ಬಗ್ಗೆ ಮಾಹಿತಿ ನೀಡಲು ಅಧಿಕಾರ ಕೊಟ್ಟವರು ಯಾರು? ಇನ್ನು ಪಕ್ಷದ ವತಿಯಿಂದ ಸಮೇಕ್ಷೆ ನಡೆಸಿದ ಇಂಟಲಿಜೆನ್ಸಿ ಮಾಹಿತಿಯಾಗಿದ್ದರೆ, ಪಕ್ಷದ ವರೀಷ್ಟರಿಗೆ ಮಾಹಿತಿ ಸಲ್ಲಿಸಬೇಕಿದ್ದ ತಂಡ ರಾಮಣ್ಣ ಲಮಾಣಿ ಅವರಿಗೆ ಮೊದಲೇ ಹೇಳಿದ್ದು ಎಷ್ಟು ಸರಿ? ಅಂದರೆ ಮಾಹಿತಿ ನೀಡುವ ಇಂಟಲಿಜೆನ್ಸಿ ಶಾಸಕ ರಾಮಣ್ಣ ಲಮಾಣಿ ಅವರ ಅಣತಿಯಂತೆ ಸಮೀಕ್ಷೆ ನಡೆಸಿರಬಹುದು ಎನ್ನುವ ಅನುಮಾನವನ್ನು ಅಲ್ಲಗಳೆಯುವಂತಿಲ್ಲ. ಈ ಬಗ್ಗೆ ಶಾಸಕ ರಾಮಣ್ಣ ಲಮಾಣಿ ಅವರು ಮಾತನಾಡಿದ ವಿಡಿಯೋ ಈಗ ವೈರಲ್ ಆಗಿದೆ.