ಬೆಂಗಳೂರು, ಮೇ 27,:
ವಿದ್ಯುತ್ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೇಂದ್ರ ಸರ್ಕಾರ 3 ತಿಂಗಳ ಕಾಲಮಿತಿ ವಿಧಿಸಿ ಒತ್ತಡ ಹೇರುತ್ತಿದೆ.ಆದರೆ,ರಾಜ್ಯ ಬಿಜೆಪಿ ನಾಯಕರು ಆ ಯೋಜನೆ ಅನುಷ್ಠಾನಗೊಳಿಸಲು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಆಪಾದಿಸಿದೆ
ಈ ವಿಷಯದಲ್ಲಿ ಷರಾಜ್ಯ ಬಿಜೆಪಿ ನಾಯಕರ ವರ್ತನೆಯ ಬಗ್ಗೆ ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಗೆ ಲಿಖಿತ ದೂರು ನೀಡುವುದಾಗಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಬಾಬು ಹಾಗೂ ಪಕ್ಷದ ವಕ್ತಾರ ಎಂ. ಲಕ್ಷ್ಮಣ್, ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರವಾಗಿ ಬಿಜೆಪಿ-ಜೆಡಿಎಸ್ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು.
“ಸ್ಮಾರ್ಟ್ ಮೀಟರ್‌ನಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸುವ ಮೂಲಕ ರಾಜ್ಯದ ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರದ ಯೋಜನೆ ರಾಜ್ಯದಲ್ಲಿ ಅನುಷ್ಠಾನಗೊಳ್ಳದಂತೆ ಬಿಜೆಪಿ ನಾಯಕರೇ ನೋಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರ ಸುಳ್ಳು ಪ್ರಚಾರದ ವಿರುದ್ಧ ಕೆಪಿಸಿಸಿ ವತಿಯಿಂದ ಕೇಂದ್ರ ಇಂಧನ ಸಚಿವ ಖಟ್ಟರ್ ಅವರಿಗೆ ಪತ್ರ ಬರೆಯುವ ಮೂಲಕ ಲಿಖಿತ ದೂರನ್ನು ನೀಡಲಿದೆ,ಎಂದು ತಿಳಿಸಿದರು.
ಅಶ್ವತ್ಥನಾರಾಯಣ ಮಾಡಿರುವ ಆರೋಪವನ್ನು ಎರಡು ದೃಷ್ಟಿಕೋನಗಳಲ್ಲಿ ನೋಡಬೇಕಾಗಿದೆ. ರಾಜ್ಯದಲ್ಲಿ ಬೇನಾಮಿ ವ್ಯವಹಾರಗಳಿಗೆ ಖ್ಯಾತಿ ಪಡೆದಿರುವ ಅವರು ಟೆಂಡರ್ ಪಡೆಯಲು ಪ್ರಯತ್ನಿಸಿದ್ದರಾ? ಅದು ಸಿಗದ ಕಾರಣಕ್ಕೆ ಆರೋಪ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಇದೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಈ ರಾಜ್ಯ ಕಂಡ ಯಶಸ್ವಿ ಸಚಿವರು. ಅಲ್ಪಸಂಖ್ಯಾತ ಸಮುದಾಯದ ನಾಯಕ ಜಾರ್ಜ್ ಅವರ ಮೇಲೆ ಬಿಜೆಪಿ ನಾಯಕರು ನಿರಂತರವಾಗಿ ಸುಳ್ಳು ಆರೋಪ ಮಾಡುತ್ತಿರುವುದೇಕೆ?,”ಎಂದು ಪ್ರಶ್ನಿಸಿದರು.
ಅಶ್ವತ್ಥನಾರಾಯಣ ಅವರು ತಮ್ಮ ಊಹೆಗೆ ತಕ್ಕಂತೆ 900 ರೂ.ಗೆ ಸ್ಮಾರ್ಟ್ ಮೀಟರ್ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಇದು ಕೇಂದ್ರ ಸರ್ಕಾರ ಪ್ರತಿ ಮೀಟರ್‌ಗೆ ನೀಡುವ ಸಬ್ಸಿಡಿ ಮೊತ್ತ. ದೇಶದ 27 ರಾಜ್ಯಗಳು ಈ ಸಬ್ಸಿಡಿ ಪಡೆದು ಸ್ಮಾರ್ಟ್ ಮೀಟರ್ ಅಳವಡಿಸುತ್ತಿವೆ. ಇದು ಮೀಟರ್ ಮೊತ್ತ ಅಲ್ಲ. ಸಬ್ಸಿಡಿ ಮೊತ್ತ.ಇದನ್ನುಷಮೀಟರ್ ಮೊತ್ತ ಎಂದು ಹೇಳಿ ಜನರ ಕಿವಿಗೆ ಚೆಂಡುಹೂ ಮುಡಿಸುವ ಪ್ರಯತ್ನ ಮಾಡುತ್ತಿದ್ದಾರೆ,”ಎಂದು ವ್ಯಂಗ್ಯವಾಡಿದರು
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 2024ರ ಫೆಬ್ರವರಿ 6 ಮತ್ತು ಮಾರ್ಚ್ 6ರಂದು ಹೊರಡಿಸಿದ್ದ ನಿಯಮಾವಳಿ ಪ್ರಕಾರ ರಾಜ್ಯದಲ್ಲಿ ಎಲ್ಲ ತಾತ್ಕಾಲಿಕ ಸ್ಥಾಪನಗಳು ಹಾಗೂ ಹೊಸ ಸ್ಥಾಪನಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಸೂಚಿಸಿತ್ತು. ಅದರಂತೆ ಕೆಟಿಪಿಪಿ ಕಾಯ್ದೆ ಅನುಸಾರ 2024ರ ಸೆಪ್ಟೆಂಬರ್ 26ರಂದು ಟೆಂಡರ್ ಕರೆಯಲಾಗಿತ್ತು ಎಂದು ವಿವರಿಸಿದರು
ಎಂ. ಲಕ್ಷ್ಮಣ್ ಮಾತಾಡಿ, “ಅಶ್ವತ್ಥ ನಾರಾಯಣ ಅವರು 15,698 ಕೋಟಿ ಹಗರಣ ಎನ್ನುತ್ತಿದ್ದಾರೆ. ಅದು ಹೇಗೆ ಎಂದು ಅವರೇ ಹೇಳಬೇಕು. ಅಶ್ವತ್ಥನಾರಾಯಣ ಅವರು ಅಪ್ರಬುದ್ಧವಾಗಿ ಮಾತನಾಡುತ್ತಿದ್ದಾರೆ. ಅವರ ಪ್ರಕಾರ 900 ರೂಪಾಯಿಗೆ ಮೀಟರ್ ಸಿಗುತ್ತದಂತೆ. ಈ 900 ರೂಪಾಯಿಗೆ ಸ್ಮಾರ್ಟ್ ಮೀಟರ್ ಎಲ್ಲಿ ಸಿಗುತ್ತದೆ? ಇದನ್ನು ಪೂರೈಸುವ ಗುತ್ತಿಗೆದಾರರು ಯಾರು ಎಂದು ಅಶ್ವತ್ಥ ನಾರಾಯಣ ಅವರೇ ಹೇಳಬೇಕು ಎಂದು ಆಗ್ರಹಿಸಿದರು.
ಅವರಿಗೆ ಈ ರಾಜ್ಯದ ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆಯನ್ನು ಅವರಿಗೆ ನೀಡಬಹುದು. ಅವರು ಲಿಖಿತ ರೂಪದಲ್ಲಿ ಅವರ ಮಾಹಿತಿಯನ್ನು ಕೊಡಲಿ. ನಾನೇ ಅವರನ್ನು ಸಿಎಂ ಮುಂದೆ ನಿಲ್ಲಿಸಿ ಅವರಿಂದಲೇ ಯೋಜನೆ ಜಾರಿಗೊಳಿಸೋಣ ಎಂದು ಹೇಳುತ್ತೇನೆ,”ಎಂದರು.
ಅಶ್ವತ್ಥ ನಾರಾಯಣ ಅವರ ಮುಖ್ಯ ಉದ್ದೇಶ ಬ್ಲಾಕ್ ಮೇಲ್ ತಂತ್ರ. ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳ ಬಯಸುತ್ತೇನೆ. ಈ ಟೆಂಡರ್ ಅಲ್ಲಿ ಭಾಗವಹಿಸಿದ್ದ ಸಹ್ಯಾದ್ರಿ ಸಂಸ್ಥೆಗೂ ನಿಮಗೂ ಏನು ಸಂಬಂಧ? ಅವರ ಟೆಂಡರ್ ಅರ್ಜಿ ವಜಾಗೊಂಡ ನಂತರ ನೀವು ಕೆಂಡಾಮಂಡಲವಾಗಿ ಸಚಿವರಾದ ಜಾರ್ಜ್ ಅವರ ವಿರುದ್ಧ ನಿರಂತರ ಆರೋಪ ಮಾಡುತ್ತಿದ್ದೀರಲ್ಲಾ ಯಾಕೆ? ನಮ್ಮ ಪ್ರಶ್ನೆಗೆ ಉತ್ತರ ಕೊಡಿ ಇಲ್ಲಿದ್ದರೆ, 2011ನೇ ಇಸವಿಯಿಂದ ನೀವು ಮಾಡಿರುವ ಅನಾಚಾರಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇವೆ,”ಎಂದು ತಿಳಿಸಿದರು.
Previous Articleಬಿಜೆಪಿಗೆ ಗುಡ್ ಬೈ ಹೇಳಲು 12 ಶಾಸಕರು ರೆಡಿ.
Next Article ಯೋಧರಿಗೆ DCM ಬಂಪರ್ ಕೊಡುಗೆ .
