ಬೆಂಗಳೂರು,ಫೆ.17:
ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊಸ ದಾಖಲೆ ನಿರ್ಮಿಸಿದೆ. ಇಲಾಖೆ ಮಂತ್ರಿ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಆಸಕ್ತಿ ಪರಿಣಾಮ ರಾಜ್ಯ ವಿಕೇಂದ್ರೀಕರಣ ಸೂಚ್ಯಂಕದಲ್ಲಿ ಅಗ್ರ ಸ್ಥಾನ ಪಡೆದಿದೆ
ಗ್ರಾಮಗಳ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಹತ್ತು ಹಲವು ಪ್ರಗತಿಪರ ಯೋಜನೆಗಳು ಮತ್ತು ಜಾರಿಗೆ ತರುತ್ತಿರುವ ಹೊಸ ಕಾರ್ಯಕ್ರಮಗಳು ಕರ್ನಾಟಕ ರಾಜ್ಯವು ದೇಶದ ಪಂಚಾಯತ್‌ರಾಜ್ ವಿಕೇಂದ್ರೀಕರಣದ ಸೂಚ್ಯಂಕದಲ್ಲಿ ಮೊದಲ ಸ್ಥಾನಕ್ಕೇರುವಂತೆ ಮಾಡಿವೆ.
ಇದಲ್ಲದೆ ಹಣಕಾಸು ನಿರ್ವಹಣೆ, ಉತ್ತರದಾಯಿತ್ವ, ಪರಿಣಾಮಕಾರಿ ಆರ್ಥಿಕ ವಿಕೇಂದ್ರೀಕರಣ, ಸಕಾಲದಲ್ಲಿ ಅನುದಾನ ಬಿಡುಗಡೆ, 15ನೇ ಹಣಕಾಸು ಆಯೋಗದ ಅನುದಾನ ಪರಿಣಾಮಕಾರಿ ಬಳಕೆ,ಬಲಿಷ್ಠ ಗ್ರಾಮಸಭೆ ಮತ್ತು ಸಾಮಾಜಿಕ ಆಡಿಟ್ ಕ್ಷೇತ್ರದಲ್ಲೂ ಸಹ ಉತ್ತಮ ಸ್ಥಾನ ಪಡೆದಿದೆ. ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಮತ್ತು ಪಂಚಾಯತ್ ರಾಜ್ ಸಚಿವಾಲಯ ನಡೆಸಿರುವ 2023-24ನೇ ಸಾಲಿನ ಅಧ್ಯಯನದ ವರದಿಯಲ್ಲಿ ಕರ್ನಾಟಕದ ಸಾಧನೆ ಉಲ್ಲೇಖಿಸಲಾಗಿದೆ.
ಒಟ್ಟಾರೆ ಪಂಚಾಯತ್ ವಿಕೇಂದ್ರೀಕರಣ ಸೂಚ್ಯಂಕ ಮತ್ತು ಚೌಕಟ್ಟು, ಕಾರ್ಯಗಳು, ಹಣಕಾಸು, ಕಾರ್ಯಕರ್ತರು, ಸಾಮರ್ಥ್ಯ ವರ್ಧನೆ ಹಾಗೂ ಉತ್ತರದಾಯಿತ್ವ ಅಂಶಗಳ ಮೇಲೆ ಶ್ರೇಯಾಂಕ ನೀಡಲಾಗಿದೆ.
ವಿಕೇಂದ್ರೀಕರಣದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದರೆ, ಕೇರಳ ದ್ವಿತೀಯ, ತಮಿಳುನಾಡು ತೃತೀಯ, ಮಹಾರಾಷ್ಟ್ರ ನಾಲ್ಕನೆ ಹಾಗೂ ಉತ್ತರ ಪ್ರದೇಶ ಐದನೇ ಸ್ಥಾನ ಪಡೆದಿದೆ. ಕರ್ನಾಟಕವು ಪಾರದರ್ಶಕತೆಯಲ್ಲಿ ಹೊಸ ಮಾನದಂಡಗಳನ್ನು ರೂಪಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನ ಕ್ರಮವಾಗಿ ಕೇರಳ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ಪಡೆದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ
Previous Articleಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಇರೊಲ್ಲವಂತೆ
Next Article ಬೆಂಗಳೂರು ನಾಗರಿಕರೇ ಎಚ್ಚರ