ಬೆಂಗಳೂರು,ಜೂ.1-
ಉನ್ನತ ವ್ಯಾಸಂಗ ಮಾಡಲು ಮುಂದಾಗುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಬರೋಬರಿ 18 ಕೋಟಿ ರೂ ವಂಚನೆ ನಡೆಸಿರುವ ಖತರ್ನಾಕ್ ಖದೀಮನನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರ ಮೂಲದ ಶ್ರೀನಿವಾಸುಲು ಬಂಧಿತ ಆರೋಪಿ. ಈತ ಗೀಕ್ ಲರ್ನ್ ಎನ್ನುವ ಕೋಚಿಂಗ್ ಸಂಸ್ಥೆ ಕಟ್ಟಿ ಡಾಟಾ ಸೈನ್ಸ್ ಕೋರ್ಸ್ ನಲ್ಲಿ ಪದವಿ ಕೊಡಿಸುವ ನೆಪದಲ್ಲಿ ಮೋಸ ಮಾಡಿದ್ದಾನೆ.
ಈತನ ವಂಚನೆಯ ಜಾಲಕ್ಕೆ ಬಿದ್ದವರಲ್ಲಿ ಪ್ರಮುಖವಾಗಿ 20 ರಿಂದ 25 ವಯಸ್ಸಿನ ಯುವಕ-ಯುವತಿಯರು ಎನ್ನುವುದು ಗಮನಾರ್ಹ.
ಈ ಶ್ರೀನಿವಾಸುಲು ಮೊದಲಿಗೆ ಉಚಿತ ಶಿಕ್ಷಣ ಕೊಡಿಸುವ ಹೆಸರಲ್ಲಿ ಅನೇಕ ಯುವಕ ಯುವತಿಯನ್ನು ಆಕರ್ಷಿಸಿ ತನ್ನ ಸಂಸ್ಥೆಗೆ ಸೇರಿಕೊಳ್ಳುವಂತೆ ಮಾಡುತ್ತಿದ್ದ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆಸರಲ್ಲಿ ಸಾಲ ಪಡೆದುಕೊಂಡು “ನಾವೇ ಸಾಲವನ್ನು ಕಂತು ಕಂತಾಗಿ ತೀರಿಸುತ್ತೇವೆ” ಎಂದು ನಂಬಿಸುತ್ತಿದ್ದ. ನಂತರ ಕೋರ್ಸ್ಗೆ ಬೇಕಾದಂತಹ ಅಗತ್ಯ ದಾಖಲೆಗಳನ್ನು ಬ್ಯಾಂಕ್ ಗಳಿಗೆ ಕೊಡಿಸುತ್ತಿದ್ದ. ಆದರೆ ಹಣವನ್ನು ಮಾತ್ರ ತನ್ನ ಖಾತೆಗೆ ವರ್ಗಾವಣೆ ಆಗುವಂತೆ ಮಾಡುತ್ತಿದ್ದ. ಕಡೆಗೆ ಸಾಲವನ್ನು ತೀರಿಸದೇ ವಿದ್ಯಾರ್ಥಿಗಳನ್ನು ಸಾಲದ ಕೂಪಕ್ಕೆ ದೂಡಿದ್ದಾನೆ.
ಇದೀಗ ಇಂತಹವರೆಲ್ಲಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈತ ಒಟ್ಟು 18 ಕೋಟಿ ರೂಗಳಿಗೂ ಹೆಚ್ಚು ಹಣವನ್ನು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಭೂಪ ಇಲ್ಲಿಯವರೆಗೆ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಹಣ ಪಡೆದಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.