ಬೆಂಗಳೂರು,ಆ.6:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪದಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡುವ ವಿಚಾರದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಎಚ್ಚರಿಕೆಯ ನಡೆ ಇಡಲು ತೀರ್ಮಾನಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಸಲ್ಲಿಸಿರುವ ಮನವಿಯ ಹಿನ್ನೆಲೆಯಲ್ಲಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಶೋಕಾಸ್ ಜಾರಿಗೊಳಿಸಿರುವ ಅವರು ಇದೀಗ ಇದಕ್ಕೆ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಲ್ಲಿಸಿರುವ ವಿವರಣೆಯ ಕುರಿತಂತೆ ಪರಿಶೀಲನೆ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪ್ರತಿಪಕ್ಷಗಳ ಸರ್ಕಾರಗಳನ್ನು ಅಸ್ಥಿರಗೊಳಿಸಲು ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಎಚ್ಚರಿಕೆಯ ನಡೆ ಇಡಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ಇಲಾಖೆಯ ಜೊತೆಗೆ ಸತತ ಸಮಾಲೋಚನೆ ನಡೆಸುತ್ತಿರುವ ರಾಜ್ಯಪಾಲರು ಪ್ರಕರಣದ ಕುರಿತಂತೆ ಹಲವು ಸುತ್ತಿನಲ್ಲಿ ಹಿರಿಯ ವಕೀಲರು ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ
ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಂಪುಟ ಸಭೆ ನಡೆಸಿ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೀಡಿರುವ ಶೋಕಾಸ್ ಹಿಂದೆ ಪಡೆಯಲು ಸಲಹೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಇದಕ್ಕೆ ಪೂರಕವಾದ ದಾಖಲೆಗಳೊಂದಿಗೆ ಸಂಪುಟ ಸಭೆಯ ನಿರ್ಧಾರವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ರಾಜ್ಯಪಾಲರಿಗೆ ರವಾನಿಸಿದ್ದಾರೆ.
ದೆಹಲಿಯಿಂದ ಹಿಂತಿರುಗಿದ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಿರುವ ವರದಿಯನ್ನು ಪರಿಶೀಲಿಸಿದ್ದಾರೆ ಇದಲ್ಲದೆ ದೂರು ಸಲ್ಲಿಸಿರುವ ಅಬ್ರಹಾಂ ಅವರ ಕುರಿತಂತೆ ಕಾಂಗ್ರೆಸ್ ಪಕ್ಷ ಮತ್ತು ಮಂತ್ರಿಗಳು ನೀಡಿರುವ ವರದಿಯನ್ನು ಕೂಡ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ವಿರುದ್ಧ ಖಾಸಗಿ ದೂರು ಸಲ್ಲಿಸಲು ಮನವಿ ನೀಡಿರುವ ಅಬ್ರಹಾಂ ಒಬ್ಬ ಬ್ಲಾಕ್ ಮೇಲರ್ ಎಂದು ಆರೋಪಿಸಿದ್ದರು ಇದರ ಬೆನ್ನಲ್ಲೇ ಈ ಹಿಂದೆ ರಾಜ್ಯಪಾಲರು ಅಬ್ರಹಾಂ ಅವರ ಕಾರ್ಯ ವೈಖರಿ ಕುರಿತಂತೆ ನೀಡಿದ್ದ ವರದಿಯೊಂದರ ಪ್ರತಿಯನ್ನು ಕಾಂಗ್ರೆಸ್ ನಾಯಕರು ಪ್ರದರ್ಶಿಸಿ ಇಂತಹ ವ್ಯಕ್ತಿಯ ದೂರಿನ ಬಗ್ಗೆ ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಬಾರದು ಎಂದು ಆಗ್ರಹಿಸಿದ್ದರು.
ಇದರ ಬೆನ್ನಲ್ಲೇ ಮತ್ತೆ ರಾಜ್ಯಪಾಲರು ಅಬ್ರಹಾಂ ಅವರನ್ನು ರಾಜಭವನಕ್ಕೆ ಕರೆಸಿಕೊಂಡು ಅವರ ವಿರುದ್ಧ ಕೇಳಿ ಬಂದ ಆರೋಪ ಮತ್ತು ಅವರು ಮುಖ್ಯಮಂತ್ರಿಗಳ ವಿರುದ್ಧ ಸಲ್ಲಿಸಿರುವ ದೂರಿನ ಕುರಿತಂತೆ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಈ ವೇಳೆ ಅಬ್ರಾಹಂ ಅವರು ತಾವು ದುರುದ್ದೇಶ ಪೂರ್ವಕವಾಗಿ ಮುಖ್ಯಮಂತ್ರಿಗಳ ವಿರುದ್ಧ ದೂರು ನೀಡುತ್ತಿಲ್ಲ ಅವರ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ ಮಾಡಿದ್ದೇನೆ ಸರ್ಕಾರದ ಅಧಿಕೃತ ದಾಖಲೆಗಳನ್ನು ಅಡಕ ಮಾಡಿ ದೂರು ಸಲ್ಲಿಸಿದ್ದೇನೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.
ಈ ಬೆಳವಣಿಗೆ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಾಹಂ ಅವರು
ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ 1988ರ ಸೆಕ್ಷನ್ 7, 9, 11, 12, ಮತ್ತು 15ರಲ್ಲಿ ಹಾಗೂ ಭಾರತೀಯ ನ್ಯಾಯ ಸಂಹಿತ 2023ರಡಿ ಸೆಕ್ಷನ್ 59, 61, 62, 201, 227, 228, 229, 239, 314, 316(5), 318(1)(2)(3), 319, 322, 324 (1)(2)(3), 335, 336, 338 ಮತ್ತು 340ರಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವಂತೆ ಕೋರಿದ್ದೇನೆ ಎಂದು ತಿಳಿಸಿದರು.
ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಎರಡನೇ ಶೋಕಾಸ್ ನೋಟಿಸ್ ನೀಡಿಲ್ಲ ನನ್ನ ವಿರುದ್ಧ ಅವರು ಮಾಡಲಾಗಿರುವ ಕೆಲವು ಆರೋಪಗಳ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ ಅವುಗಳೆಲ್ಲದರ ಬಗ್ಗೆ ವಿವರಣೆ ನೀಡಿದ್ದೇನೆ ತಾವು ಯಾವ ಕಾರಣಕ್ಕಾಗಿ ಮನವಿ ಸಲ್ಲಿಸಿದ್ದೇನೆ ಎಂಬ ಅಂಶವನ್ನು ರಾಜ್ಯಪಾಲರಿಗೆ ವಿವರಿಸಿದ್ದು ಅವರು ನನ್ನ ಉತ್ತರದ ಬಗ್ಗೆ ತೃಪ್ತಿ ಹೊಂದಿದ್ದಾರೆ ಅಲ್ಲದೆ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.
Previous Articleಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು
Next Article ಸರ್ಕಾರದ ಉತ್ತರಕ್ಕೆ ರಾಜ್ಯಪಾಲರು ಸಮಾಧಾನ.?